ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಳಸಾಪೂರ ರಸ್ತೆಯಲ್ಲಿರುವ ಶ್ರೀ ಶಿವಾನಂದ ಬ್ರಹ್ಮಮಠದ ಜಾತ್ರೆಯ ಅಂಗವಾಗಿ ಸೋಮವಾರ ಮಹಾರಥೋತ್ಸವ ಹಾಗೂ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ-ಸಂಭ್ರಮದಿಂದ ಜರುಗಿತು.
ಮಹಾಶಿವರಾತ್ರಿ ಹಾಗೂ ಜಾತ್ರೆಯ ನಿಮಿತ್ತ ಮಠದ ಗದ್ದುಗೆಗೆ ಸೋಮವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಗದಗ-ಬೆಟಗೇರಿ ಅವಳಿ ನಗರ ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಗ್ರಾಮೀಣ ಭಾಗದಿಂದ ಸಾವಿರಾರು ಭಕ್ತಾದಿಗಳು ಬಿಸಿಲನ್ನೂ ಲೆಕ್ಕಿಸದೆ ಗದ್ದುಗೆ ದರ್ಶನ ಪಡೆದು ಪುನೀತರಾದರು.
ಸಂಜೆ ನಡೆದ ಜಗದ್ಗುರು ಅಭಿನವ ಶಿವಾನಂದ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಭವ್ಯವಾಗಿ ಜರುಗಿತು. ಪಾದಗಟ್ಟೆಯವರೆಗೆ ಸಾಗಿದ ಮಹಾರಥೋತ್ಸವದ ಹಾದಿಯುದ್ದಕ್ಕೂ ಭಕ್ತರು ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟದೈವಕ್ಕೆ ಭಕ್ತಿ ಸಮರ್ಪಿಸಿದರು.
ಸಂಭ್ರಮದ ಮೆರವಣಿಗೆಗೆ ಡೊಳ್ಳು ಕುಣಿತ, ಚಂಡೆ ಮದ್ದಳೆ, ನಂದಿಕೋಲು, ಸಮ್ಮಾಳ ಮೇಳಗಳು ಮೆರಗು ನೀಡಿದವು. ವಿವಿಧ ಭಜನಾ ಮಂಡಳಿಗಳ ಗಾಯನವು ಮಠದ ಆವರಣದಲ್ಲಿ ಆಧ್ಯಾತ್ಮಿಕ ಕಳೆಯನ್ನು ಹೆಚ್ಚಿಸಿತ್ತು. ಜಾತ್ರಾ ಹಿನ್ನೆಲೆಯಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.



