ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದೊಡ್ಡರಿ ಕಾವಲು ಗೇಟ್ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ರಮೇಶ್ (23) ಮತ್ತು ಪುರುಷೋತ್ತಮ್ (26) ಎಂದು ಗುರುತಿಸಲಾಗಿದೆ.
ರಮೇಶ್ ಹಾಗೂ ಕಿರಣ್ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬರುತ್ತಿದ್ದ ಪುರುಷೋತ್ತಮ್ ಅವರ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಯಿಂದ ರಮೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಪುರುಷೋತ್ತಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸ್ಕೂಟಿಯಲ್ಲಿ ಇದ್ದ ಕಿರಣ್ ಗಂಭೀರ ಗಾಯಗಳೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲ್ಯದಲ್ಲೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಮೇಶ್ ಹೆಲ್ಮೆಟ್ ಧರಿಸಿಕೊಂಡಿದ್ದರೂ, ಅಪಘಾತದ ರಭಸಕ್ಕೆ ಬೈಕ್ ಹ್ಯಾಂಡಲ್ ಎದೆಗೆ ಒತ್ತಿಕೊಂಡ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಕಣ್ಣೀರಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಸಾವೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



