ಕಲಬುರ್ಗಿ: ಹಲ್ಲಿನ ಸಾಮಾನ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದ ಮಹಿಳೆ ಕೋಮಾಗೆ ಜಾರಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಜೇವರ್ಗಿ ಪಟ್ಟಣದ ಖಾಜಾ ಕಾಲೋನಿ ನಿವಾಸಿ ನಾಜಿಯಾ ಬೇಗಂ ಇದೀಗ ಒಂದೂವರೆ ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನವರಿ ಒಂದರಂದು ಹಲ್ಲಿನ ನೋವಿನಿಂದ ಖಾಸಗಿ ಆಸ್ಪತ್ರೆಗೆ ಬಂದಿದ್ದ ನಾಜಿಯಾ, ಮುಂದಿನ ದಿನ ದವಡೆ ಹಲ್ಲು ತೆಗೆಯಲು ಅನಸ್ತೇಶಿಯಾ ಇಂಜೆಕ್ಷನ್ ಪಡೆದರು. ಇಂಜೆಕ್ಷನ್ ನೀಡಿದ ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಹದಗೆಟ್ಟು ಕೋಮಾಗೆ ಜಾರಿದರೆಂದು ಕುಟುಂಬ ಆರೋಪಿಸಿದೆ.
ಪತಿ ನಿಧನದ ನಂತರ ಇಬ್ಬರು ಮಕ್ಕಳನ್ನು ಸಾಕುತ್ತ ಬದುಕು ಕಟ್ಟಿಕೊಂಡಿದ್ದ ನಾಜಿಯಾ, ಇದೀಗ ಆಸ್ಪತ್ರೆ ಹಾಸಿಗೆಯಲ್ಲಿ ಜೀವದ ಹೋರಾಟ ನಡೆಸುತ್ತಿದ್ದಾರೆ. ಘಟನೆಯ ಬಳಿಕ ಆಸ್ಪತ್ರೆ ಆಡಳಿತ ಕುಟುಂಬದಿಂದ ಯಾವುದೇ ಶುಲ್ಕ ವಸೂಲಿಸದೇ ಚಿಕಿತ್ಸೆ ನೀಡುತ್ತಿರುವುದಾಗಿ ಹೇಳಿದೆ. ಸುಮಾರು ನಲವತ್ತೈದು ದಿನಗಳಲ್ಲಿ ಎಂಟು ಲಕ್ಷ ರೂಪಾಯಿಗೂ ಅಧಿಕ ವೆಚ್ಚವನ್ನು ಸಂಸ್ಥೆಯೇ ಭರಿಸಿದೆ ಎನ್ನಲಾಗಿದೆ.
ಆದರೂ, ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿಲ್ಲ. ಫಿಜಿಯೋಥೆರಪಿ ಚಿಕಿತ್ಸೆಯ ಅಗತ್ಯವಿರುವುದರಿಂದ ಅವರನ್ನು ಬೆಂಗಳೂರು ಅಥವಾ ಹೈದ್ರಾಬಾದ್‌ನ ಉನ್ನತ ಮಟ್ಟದ ಆಸ್ಪತ್ರೆಗೆ ಸ್ಥಳಾಂತರಿಸಲು ವೈದ್ಯರು ಸಲಹೆ ನೀಡಿದ್ದಾರೆ.
ವೈದ್ಯರ ಯಡವಟ್ಟು ಕಾರಣದಿಂದ ಈ ಸ್ಥಿತಿ ಉಂಟಾಗಿದೆ ಎಂದು ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡುತ್ತಿದ್ದಾರೆ. ಆದರೆ ಚಿಕಿತ್ಸೆ ಕ್ರಮದಲ್ಲಿ ಯಾವುದೇ ತಪ್ಪಿಲ್ಲ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆರೋಪ–ಪ್ರತಿಆರೋಪಗಳ ನಡುವೆ ನಾಜಿಯಾ ಬೇಗಂ ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದು, ಮಕ್ಕಳ ಭವಿಷ್ಯ ಪ್ರಶ್ನಾರ್ಥಕವಾಗಿದೆ.



