ಚಿತ್ರದುರ್ಗ: ಬಸವಣ್ಣನವರಂತಹ ಸಾಂಸ್ಕೃತಿಕ ನಾಯಕರ ಕುರಿತು ತುಚ್ಛವಾಗಿ ಬರೆಯುವ ಮತ್ತು ಅವರ ತೇಜೋವಧೆ ಮಾಡುವ ಸ್ವಯಂಘೋಷಿತ ಸಂಶೋಧಕರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿ ಹಂಜ್ ರಚಿಸಿರುವ ‘ಬಸವ ಮಂಟಪ’ ಕೃತಿಯಲ್ಲಿನ ವಿಚಾರಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಪುಸ್ತಕವನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಶ್ರೀಗಳು, ರವಿ ಹಂಜ್ ಅವರು ಮೊದಲಿನಿಂದಲೂ ಲಿಂಗಾಯತರು, ಬಸವಣ್ಣನವರು ಹಾಗೂ ತಮ್ಮ ಮಠದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹವಾಗಿ ಬರೆಯುತ್ತ ಬಂದಿದ್ದಾರೆ. ಕೆಲವರು ಇಂತಹ ಬರಹಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
564 ಪುಟಗಳ ಕೃತಿಯಲ್ಲಿ ಬಸವಣ್ಣನವರ ತೇಜೋವಧೆ ಆರೋಪ
ರವಿ ಹಂಜ್ ಅವರು ತಮ್ಮ ವಿಶ್ವವಾಣಿ ಪ್ರಕಾಶನದ ಮೂಲಕ 564 ಪುಟಗಳ ‘ಬಸವ ಮಂಟಪ’ ಪುಸ್ತಕವನ್ನು ಪ್ರಕಟಿಸಿ, ನವೆಂಬರ್ 15ರಂದು ಬಿಡುಗಡೆ ಮಾಡಿದ್ದಾರೆ. ಕೃತಿಯುದ್ದಕ್ಕೂ ಬಸವಣ್ಣನವರ ತೇಜೋವಧೆ ಮಾಡುವ ವಿಚಾರಗಳಿವೆ. ವಚನಗಳನ್ನು ತಮ್ಮದೇ ಭಾವನೆಗಳಿಗೆ ಅನುಗುಣವಾಗಿ ಅರ್ಥೈಸುವ ಮೂಲಕ ಅವುಗಳ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ಷೇಪಿಸಿದರು.
ಬಸವಣ್ಣನವರು ಪೌರಾಣಿಕ ವ್ಯಕ್ತಿ, ಬಿಜ್ಜಳನ ಕೊಲೆಗೆ ಕಾರಣರಾದವರು ಹಾಗೂ ಭಂಡಾರದ ಲೂಟಿ ಮಾಡಿದ್ದಾರೆ ಎಂಬಂತಹ ಆರೋಪಗಳನ್ನು ಕೃತಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು. ‘ಕಳಬೇಡ’ ಎಂದು ಬೋಧಿಸಿದ ಬಸವಣ್ಣನವರನ್ನು ಕೃತಿಯಲ್ಲಿ ಲೂಟಿಕೋರರು, ಕೊಲೆಗಡುಕರು ಮತ್ತು ಸುಳ್ಳುಗಾರರು ಎಂದು ಬಿಂಬಿಸಲಾಗಿದೆ ಎಂಬುದು ಶ್ರೀಗಳ ಆರೋಪವಾಗಿದೆ.
ಇತರೆ ಶರಣರ ವಚನಗಳ ಬಗ್ಗೆಯೂ ಆಕ್ಷೇಪ
ಬಸವಣ್ಣನವರಷ್ಟೇ ಅಲ್ಲದೆ ಇತರೆ ಶರಣರ ವಚನಗಳಲ್ಲಿಯೂ ದ್ವಂದ್ವಗಳಿವೆ ಮತ್ತು ಅವರ ಆಚಾರ-ವಿಚಾರಗಳಿಗೆ ಸಂಬಂಧವಿಲ್ಲ ಎಂಬಂತಹ ಅಭಿಪ್ರಾಯಗಳನ್ನು ಕೃತಿಯಲ್ಲಿ ವ್ಯಕ್ತಪಡಿಸಲಾಗಿದೆ ಎಂದು ಶ್ರೀಗಳು ದೂರಿದರು. ಇಂತಹ ಬರಹಗಳು ಬಸವ ಪರಂಪರೆ, ಲಿಂಗಾಯತ ಧರ್ಮ, ಲಿಂಗಾಯತ ಸಮುದಾಯ ಹಾಗೂ ಬಸವತತ್ವದ ಅನುಯಾಯಿಗಳ ಭಾವನೆಗಳಿಗೆ ನೋವುಂಟುಮಾಡಿವೆ ಎಂದು ಹೇಳಿದರು.
ಪುಸ್ತಕ ನಿಷೇಧಕ್ಕೆ ಸರ್ಕಾರಕ್ಕೆ ಆಗ್ರಹ
‘ಬಸವ ಮಂಟಪ’ ಕೃತಿಯಲ್ಲಿರುವ ವಿಚಾರಗಳು ಆಕ್ಷೇಪಾರ್ಹವಾಗಿದ್ದು, ಸರ್ಕಾರ ಕೂಡಲೇ ಪುಸ್ತಕವನ್ನು ನಿಷೇಧಿಸಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು. ಅಲ್ಲದೆ, ಲೇಖಕ ರವಿ ಹಂಜ್ ಹಾಗೂ ಅವರ ಹಿಂದೆ ಇರುವ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.









