ತುಮಕೂರು: ತುರುವೇಕೆರೆ ಬಿಇಒ ಕಚೇರಿಯ ಎಫ್ಡಿಎ ಜಯಲಕ್ಷ್ಮೀ ಅವರ ಹತ್ಯೆ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಸಹೋದರಿ ಅನುಸೂಯಾ ಮತ್ತು ಸಾಕು ಮಗ ಚಂದ್ರಶೇಖರ್ ಬಂಧಿತರಾಗಿದ್ದಾರೆ.
ಮೊದಲಿಗೆ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಲಾಗಿತ್ತು. ಆದರೆ ಶ್ರೀನಿವಾಸ್ ಎಂಬಾತ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ತಿರುವು ಪಡೆದುಕೊಂಡಿತು. ಮರಣೋತ್ತರ ಪರೀಕ್ಷೆಯ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.
ಜಯಲಕ್ಷ್ಮೀ ಗಂಡನನ್ನು ಕಳೆದುಕೊಂಡ ಬಳಿಕ ಶ್ರೀನಿವಾಸ್ ಜೊತೆ ಕಳೆದ 20 ವರ್ಷಗಳಿಂದ ವಾಸಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ ಸಹೋದರಿಯ ಮಗನನ್ನು ದತ್ತು ಪಡೆದಿದ್ದರು. ಇತ್ತೀಚೆಗೆ ತುರುವೇಕೆರೆಯಲ್ಲಿ ಹೊಸ ಮನೆಗೆ ಹೋಗುವ ನಿರ್ಧಾರ ಮಾಡಿದ್ದು, ಬಾಡಿಗೆ ಮನೆಗೆ ಮುಂಗಡ ಹಣ ನೀಡಿದ್ದರು. ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆರೋಪಿಗಳು ಕೊಲೆಗೈದಿರಬಹುದೆಂದು ಶಂಕಿಸಲಾಗಿದೆ.
ಕೊಲೆ ಹಿಂದೆ ಆರ್ಥಿಕ ಲಾಭ ಮತ್ತು ಅನುಕಂಪದ ಆಧಾರಿತ ಸರ್ಕಾರಿ ನೌಕರಿ ಪಡೆಯುವ ಉದ್ದೇಶ ಇರಬಹುದೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



