ತುಮಕೂರು: ಶಿರಾ ಕಾರು ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ ನಾಗೇಂದ್ರ ಬಳಸಿದ ನಾಡಬಾಂಬ್ನ ಮೂಲ ಪತ್ತೆ ಇದೀಗ ಪೊಲೀಸರಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಆತ್ಮಹತ್ಯೆಗೆ ಮುನ್ನದ ಮೂರು ದಿನಗಳ ಚಲನವಲನವನ್ನು ಕಳ್ಳಂಬೆಳ್ಳ ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಿದ್ದು, ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಹೊರಬಿದ್ದಿವೆ.
ಪೊಲೀಸರ ಮಾಹಿತಿ ಪ್ರಕಾರ, ಜೂನ್ 25ರಂದು ಬೆಂಗಳೂರಿಗೆ ಬಂದಿದ್ದ ನಾಗೇಂದ್ರ ಯುವತಿ ರಮ್ಯಾಳನ್ನು ಭೇಟಿಯಾಗಿ ರಾತ್ರಿ ಅಂಕೋಲಾಗೆ ತೆರಳಿದ್ದ. ಮರುದಿನ ಅಂಕೋಲಾದಲ್ಲಿ ವಿವಿಧೆಡೆ ಸಂಚರಿಸಿದ ಬಳಿಕ ಮತ್ತೆ ಬೆಂಗಳೂರಿಗೆ ಬಂದು, ಜೂನ್ 27ರಂದು ರಮ್ಯಾಳನ್ನು ಕರೆದುಕೊಂಡು ಹೊರಟಿದ್ದ. ಬಳಿಕ ಶಿರಾ ಸಮೀಪ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಅವಧಿಯಲ್ಲಿ ನಾಗೇಂದ್ರ 10 ಮಂದಿಯನ್ನು ಖುದ್ದಾಗಿ ಭೇಟಿಯಾಗಿದ್ದು, 8 ಮಂದಿಯೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ. ಆದರೆ ವಿಚಾರಣೆ ನಡೆಸಿದವರಲ್ಲಿ ಯಾರಿಂದಲೂ ಸ್ಫೋಟಕದ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಬೇಟೆಗೆ ಬಳಸಲಾಗುವ ನಾಡಬಾಂಬ್ ನಾಗೇಂದ್ರನಿಗೆ ಹೇಗೆ ಸಿಕ್ಕಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಬಹುಮುಖ ತನಿಖೆ ನಡೆಸುತ್ತಿದ್ದಾರೆ. ಸ್ಫೋಟಕವನ್ನು ಹೊರಗಿನಿಂದ ಪಡೆದಿದ್ದಾನೆಯೇ ಅಥವಾ ಪಟಾಕಿ ಮದ್ದು ಸೇರಿದಂತೆ ಕಚ್ಚಾ ವಸ್ತುಗಳನ್ನು ಬಳಸಿ ಸ್ವತಃ ತಯಾರಿಸಿದ್ದಾನೆಯೇ ಎಂಬ ಅಂಶವನ್ನೂ ಪರಿಶೀಲಿಸಲಾಗುತ್ತಿದೆ.
ಪ್ರಕರಣದ ಮತ್ತೊಂದು ಆಯಾಮದಲ್ಲಿ, ಯುವತಿ ರಮ್ಯಾ ನೀಡಿರುವ ಕಿರುಕುಳದ ಆರೋಪಗಳು ಹಾಗೂ ನಾಗೇಂದ್ರನ ಸಂಬಂಧಿಕರು ನೀಡಿರುವ ವಿರುದ್ಧ ಹೇಳಿಕೆಗಳನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಸದ್ಯ ನಾಡಬಾಂಬ್ನ ಮೂಲ, ಸ್ಫೋಟಕ ತಯಾರಿಕೆಯ ವಿಧಾನ ಹಾಗೂ ನಾಗೇಂದ್ರನ ಸಂಪರ್ಕ ಜಾಲದ ಕುರಿತು ಕಳ್ಳಂಬೆಳ್ಳ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.



