ತುಮಕೂರು: ಶಿರಾ ತಾಲೂಕಿನ ಜೋಗಿಹಳ್ಳಿ ಸಮೀಪ ಪ್ರೇಮಿಗಳ ನಡುವಿನ ವೈಷಮ್ಯ ರಕ್ತರಂಜಿತ ದುರಂತಕ್ಕೆ ಕಾರಣವಾಗಿದ್ದು, ಯುವತಿಗೆ ಚಾಕುವಿನಿಂದ ಇರಿದ ಬಳಿಕ ಕಾರಿನೊಳಗೆ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದ್ದು, ತುಮಕೂರು–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನೊಳಗೆ ಸಂಭವಿಸಿದ ಸ್ಫೋಟದಲ್ಲಿ ಆತ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾನೆ. ಘಟನೆಯ ವೇಳೆ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ತಕ್ಷಣ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಬೆಂಗಳೂರಿನಿಂದ ಅಂಕೋಲ ಕಡೆಗೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಆರೋಪಿ ನಾಗೇಂದ್ರ ಈ ಕೃತ್ಯವನ್ನು ಪೂರ್ವಯೋಜಿತವಾಗಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆತ ಮೊದಲೇ ಬಾಡಿಗೆ ಕಾರು ಮಾಡಿಕೊಂಡು ಪೆಟ್ರೋಲ್ ಬಾಂಬ್ನ್ನು ಜೊತೆಗೆ ತಂದಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಪ್ರೇಮ ಸಂಬಂಧದ ಹಿನ್ನೆಲೆ ಘಟನೆ ನಡೆದಿರುವ ಸಾಧ್ಯತೆಯನ್ನು ಪೊಲೀಸರು ಎಲ್ಲ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದಾರೆ.
ತುಮಕೂರು ಎಸ್ಪಿ ಅಶೋಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆಯಲು ತನಿಖೆ ಚುರುಕುಗೊಳಿಸಲಾಗಿದೆ.



