ಚಿಕ್ಕಮಗಳೂರು: ಸಾಲು-ಸಾಲು ರಜೆ ಪ್ರಯುಕ್ತ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಗಾಳಿಕೆರೆ ಸೇರಿದಂತೆ ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ಏಕಾಏಕಿ ಸಾವಿರಾರು ವಾಹನಗಳು ಗಿರಿಭಾಗ ಪ್ರವೇಶಿಸಿದ ಪರಿಣಾಮ ಭಾರೀ ಟ್ರಾಫಿಕ್ ಉಂಟಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪಂಡರವಳ್ಳಿ–ಸೀತಾಳಯ್ಯನಗಿರಿ ಮಾರ್ಗದ ಕಿರಿದಾದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರು ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಸಿಲುಕಿ ಹೈರಾಣಾಗಿದ್ದಾರೆ. ಸ್ಥಳದಲ್ಲಿ ವಾಹನಗಳ ಉದ್ದನೆಯ ಸಾಲು ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾಗೂ ಚೆಕ್ಪೋಸ್ಟ್ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
ಈ ನಡುವೆ ಪ್ರವಾಸೋದ್ಯಮ ಇಲಾಖೆಯ ಆನ್ಲೈನ್ ಟಿಕೆಟ್ ನಿಯಮ ಪಾಲನೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಅಧಿಕೃತ ವ್ಯವಸ್ಥೆಯನ್ನು ಕಡೆಗಣಿಸಿ, ಒಂದೊಂದು ಕಾರಿಗೆ ₹1,000ರಿಂದ ₹1,500 ವರೆಗೆ ಹಣ ಪಡೆದು ಗಿರಿಭಾಗಕ್ಕೆ ಪ್ರವೇಶ ಕಲ್ಪಿಸಲಾಗುತ್ತಿದೆ ಎನ್ನಲಾಗಿದ್ದು, ಇದರಿಂದಲೇ ವಾಹನಗಳ ಸಂಖ್ಯೆ ನಿಯಂತ್ರಣ ತಪ್ಪಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.



