ಚಿಕ್ಕಮಗಳೂರು: ಯುವತಿಯ ಅಶ್ಲೀಲ ಫೋಟೋಗಳನ್ನು ಆಕೆಯ ತಾಯಿಗೆ ಕಳುಹಿಸಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಚಿಕ್ಕಮಗಳೂರು ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎನ್) ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಯೋಗೀಶ್ ಬಂಧಿತ ಆರೋಪಿ. ಲಕ್ಕವಳ್ಳಿ ಮೂಲದ 25 ವರ್ಷದ ಯುವತಿಯ ಅಶ್ಲೀಲ ಫೋಟೋಗಳನ್ನು ಆಕೆಯ ತಾಯಿಗೆ ಕಳುಹಿಸಿದ್ದ ಆರೋಪಿ, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದಲ್ಲದೆ ರಾತ್ರಿ ವೇಳೆ ನಿರಂತರವಾಗಿ ಕರೆ ಮಾಡಿ ಹಣ ನೀಡುವಂತೆ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯ ಕಿರುಕುಳದಿಂದ ಬೇಸತ್ತ ಮಹಿಳೆ ಚಿಕ್ಕಮಗಳೂರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.



