ಚಿಕ್ಕಮಗಳೂರು: ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಿನ್ನೆಲೆಗೆ ಪಾಕಿಸ್ತಾನ ಪರ ಹಾಡು ಬಳಸಿ ವಿಡಿಯೋ ಹರಿಬಿಟ್ಟ ಪ್ರಕರಣ ಇದೀಗ ಪೊಲೀಸರ ತನಿಖೆಗೆ ಒಳಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೇರಿದಂತೆ ಏಳು ಮಂದಿಯನ್ನು ಚಿಕ್ಕಮಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿಪ್ಪು ನಗರದಲ್ಲಿ ಈದ್ ಮಿಲಾದ್ ಅಂಗವಾಗಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿತ್ತು. ಈ ಕಟೌಟ್ ಹಿನ್ನೆಲೆಗೆ ‘ಪಾಕಿಸ್ತಾನ್ ಮುಜಾಹಿದ್ದೀನ್ ಸೈನಿಕರು’ ಎಂಬ ದೇಶವಿರೋಧಿ ಗೀತೆ ಎಡಿಟ್ ಮಾಡಿ ವಿಡಿಯೋ ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋವನ್ನು ಇನ್‌ಸ್ಟಾಗ್ರಾಮ್ ರೀಲ್ಸ್ ಹಾಗೂ ವಾಟ್ಸಾಪ್ ಸ್ಟೇಟಸ್‌ಗಳ ಮೂಲಕ ಹರಿಬಿಡಲಾಗಿತ್ತು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿ ರೋಷನ್ ಎಂಬಾತನನ್ನು ಬಂಧಿಸಿದ್ದಾರೆ. ವಿಡಿಯೋ ಸಿದ್ಧಪಡಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಇನ್ನೂ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಹಾಡನ್ನು ಮೂಲತಃ ಯಾರು ಬಳಸಿದ್ದರು? ವಿಡಿಯೋವನ್ನು ಯಾರು ಎಡಿಟ್ ಮಾಡಿದ್ದರು? ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಯಾರಾದರೂ ಪ್ರಚೋದನೆ ಅಥವಾ ಸೂಚನೆ ನೀಡಿದ್ದರೇ? ಎಂಬ ಅಂಶಗಳ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸಾಮಾಜಿಕ ಜಾಲತಾಣದ ಈ ವಿಡಿಯೋ ಪ್ರಕರಣದ ಹಿಂದೆ ಇರುವ ಸಂಪೂರ್ಣ ಜಾಲದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



