ಹಾಸನ: ಹಣದ ವಿಚಾರಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ.
ಜಗಳದ ವೇಳೆ ಕತ್ತಿಯಿಂದ ಇರಿತಕ್ಕೊಳಗಾದ ಮಹಮದ್ ಸಿದ್ದಿಕ್ (33) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜೀತ್ (29) ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಒಂದು ವರ್ಷದ ಹಿಂದೆ ದಿವ್ಯಾ ಅವರಿಗೆ ಅವರ ಅಕ್ಕ ರೇಷ್ಮಾ ₹50 ಸಾವಿರ ಸಾಲ ನೀಡಿದ್ದರು ಎನ್ನಲಾಗಿದೆ. ಹಣವನ್ನು ವಾಪಸ್ ನೀಡುವಂತೆ ರೇಷ್ಮಾ, ತಂಗಿ ದಿವ್ಯಾ ಅವರನ್ನು ಕೇಳಿದ್ದರು. ಇದೇ ವಿಚಾರವಾಗಿ ರೇಷ್ಮಾ ಪತಿ ಮಹಮದ್ ಸಿದ್ದಿಕ್ ಹಾಗೂ ದಿವ್ಯಾ ಪತಿ ಸುಜೀತ್ ನಡುವೆ ಜಗಳ ಶುರುವಾಗಿದೆ.
ಜಗಳ ತಾರಕಕ್ಕೇರಿದ ವೇಳೆ ಸುಜೀತ್ ತನ್ನ ಬಳಿಯಿದ್ದ ಕತ್ತಿಯಿಂದ ಮಹಮದ್ ಸಿದ್ದಿಕ್‌ಗೆ ಹಲವು ಬಾರಿ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಿದ್ದಿಕ್ ಅವರನ್ನು ಅರೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸಿದ್ದಿಕ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ಮಾಹಿತಿ ತಿಳಿದು ಅರೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಕೈಗೊಂಡಿದ್ದಾರೆ.

