ಆಪ್ತ ಸ್ನೇಹಿತ ವೈಶಾಕ್ ಆತ್ಮಹತ್ಯೆ ಪ್ರಕರಣದ ಬಳಿಕ ನಟಿ ಕೃಷಿ ತಾಪಂಡ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದು, ನಿರಂತರ ಊಹಾಪೋಹಗಳು ಮತ್ತು ವದಂತಿಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಸರಣಿ ಪೋಸ್ಟ್‌ಗಳಲ್ಲಿ ಮಾತನಾಡಿರುವ ಅವರು, “ನಾನು ಇನ್ನೂ ಈ ಆಘಾತದಿಂದ ಹೊರಬಂದಿಲ್ಲ. ನನ್ನನ್ನು ಸದಾ ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಯದಲ್ಲಿ ಸಾರ್ವಜನಿಕ ಹೇಳಿಕೆ ನೀಡುವ ಶಕ್ತಿಯೂ ನನ್ನಲ್ಲಿಲ್ಲ” ಎಂದು ಬರೆದುಕೊಂಡಿದ್ದಾರೆ.
ವೈಶಾಕ್ ಸಾವಿನ ಬಳಿಕ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕುಟುಂಬ ಮತ್ತು ಸ್ನೇಹಿತರು ದುಃಖದಲ್ಲಿರುವ ಸಂದರ್ಭದಲ್ಲೂ ಕೆಲವರು ಸಂವೇದನಾಶೀಲತೆ ಮರೆತು ಕೇವಲ ಪ್ರತಿಕ್ರಿಯೆಗಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಆತ್ಮೀಯನನ್ನು ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ವದಂತಿಗಳು ಮತ್ತು ಆಧಾರರಹಿತ ಚರ್ಚೆಗಳು ನಮ್ಮ ನೋವನ್ನು ಇನ್ನಷ್ಟು ಹೆಚ್ಚಿಸುತ್ತವೆ. ದಯವಿಟ್ಟು ನಮಗೆ ಶಾಂತಿಯಿಂದ ದುಃಖಿಸಲು ಅವಕಾಶ ನೀಡಿ” ಎಂದು ಅವರು ವಿನಂತಿಸಿದ್ದಾರೆ.
ಇದೇ ವೇಳೆ ತಮ್ಮ ಪರವಾಗಿ ನಿಂತು ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಕೃಷಿ, ಕೊನೆಯ ಸಂದೇಶದಲ್ಲಿ “ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೂ, ಯಾರೊಬ್ಬರ ಭರವಸೆಯನ್ನೂ ಕಸಿಯಬೇಡಿ. ದಯವಿಟ್ಟು ದಯೆ ಮತ್ತು ಮಾನವೀಯತೆಯನ್ನು ಆರಿಸಿ” ಎಂದು ಭಾವುಕ ಮನವಿ ಮಾಡಿದ್ದಾರೆ.

