ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಿಸ್ಮಯ ವೆಂಚರ್ಸ್ ನಿರ್ಮಾಣದ ‘ಏನಾಯಿತು’ ಕನ್ನಡ ಚಲನಚಿತ್ರದ ಮುಹೂರ್ತ ಹಾಗೂ ಚಿತ್ರೀಕರಣಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕ್ಯಾಮೆರಾ ಚಾಲನೆ ನೀಡಿ ಮಾತನಾಡಿದ ಸ್ವರ್ಣ ಗ್ರೂಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ್, “ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗಬೇಕು. ಇಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು. ಉತ್ತಮ ಸದಭಿರುಚಿಯ ಚಿತ್ರಗಳು ಸಮಾಜಕ್ಕೆ ಅಗತ್ಯ” ಎಂದು ಹೇಳಿದರು.
ಸಿದ್ಧಾರೂಢ ಮಠ ಟ್ರಸ್ಟ್ ಅಧ್ಯಕ್ಷ ಬಾಳು ಮಗಜಿಕೊಂಡಿ ಕ್ಲಾಪ್ ಮಾಡಿ ಮಾತನಾಡಿ, “ಇಡೀ ಕುಟುಂಬ ಕುಳಿತು ನೋಡುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರಗಳು ನಿರ್ಮಾಣವಾಗಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎವಿಕೆ ಫೌಂಡೇಶನ್ನ ವೆಂಕಟೇಶ್ ಕಾಟವೆ, ಹಿರಿಯ ಕವಿ ಮಹಾಂತಪ್ಪ ನಂದೂರ್, ಡಾ. ರಾಮು ಮುಲಗಿ, ನಾಯಕ ನಟ ಈಶಾನ್ ರಘುರಾಜನ್, ನಟಿ ಚೈತ್ರ ತೋಟದ್, ನಿರ್ದೇಶಕ ತಮನ್ನಾ, ಚಲನಚಿತ್ರ ಪತ್ರಕರ್ತ ಹಾಗೂ ಪಿಆರ್ಒ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ವಿನಾಯಕ ಶೆಟ್ಟಿ, ನವೀನ ಪಾಟೀಲ ಜೈನ್, ರಾಘು ಬುಧಪನವರ್, ಕೃಷ್ಣ ಉಲ್ಲಿಕಾಶಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಚಿತ್ರಕ್ಕೆ ಗೌರಿ ವೆಂಕಟೇಶ ಛಾಯಾಗ್ರಹಣ, ಡಾ. ಶೈಲಜಾ ಶರ್ಮ ಕಥೆ, ಈಶಾನ್ ರಘುರಾಜನ್ ಸಾಹಿತ್ಯ, ಸಂಭಾಷಣೆ ಹಾಗೂ ಚಿತ್ರಕಥೆ, ವಿ. ಮನೋಹರ ಸಂಗೀತ ನೀಡಿದ್ದು, ತಮನ್ನಾ ನಿರ್ದೇಶನ ಮಾಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.
“ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗಿ, ಇಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು.”
– ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ್



