HomeGadag Newsಆ.14ರಿಂದ ಗದಗದಲ್ಲಿ ‘ಉತ್ಸವ’ದ ಸಂಭ್ರಮ

ಆ.14ರಿಂದ ಗದಗದಲ್ಲಿ ‘ಉತ್ಸವ’ದ ಸಂಭ್ರಮ

ವಿಜಯಸಾಕ್ಷಿ ಸುದ್ದಿ, ಗದಗ: ಕೈಗಾರಿಕೆ, ವ್ಯಾಪಾರ, ಉದ್ಯಮಶೀಲತೆ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಒಂದೇ ವೇದಿಕೆ ಕಲ್ಪಿಸುವ ‘ಗದಗ ಉತ್ಸವ–2026’ ಆ.14ರಿಂದ 18ರವರೆಗೆ ನಗರದ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆಯಲಿದೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ತಿಳಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ದಿನಗಳ ಉತ್ಸವದಲ್ಲಿ ಕೈಗಾರಿಕಾ ವಸ್ತುಗಳ ಪ್ರದರ್ಶನ–ಮಾರಾಟ ಮೇಳ, ಸ್ವಸಹಾಯ ಸಂಘಗಳ ಉತ್ಪನ್ನಗಳು, ಕರಕುಶಲ ವಸ್ತುಗಳು, ಅತ್ಯಾಧುನಿಕ ಯಂತ್ರೋಪಕರಣಗಳ ಪ್ರದರ್ಶನ, ಉದ್ಯಮಶೀಲತಾ ಕಾರ್ಯಾಗಾರ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ರಕ್ತದಾನ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳ ಕೈಗಾರಿಕಾ ಉತ್ಪನ್ನಗಳ ಜತೆಗೆ ವ್ಯಾಪಾರಸ್ಥರಿಗೆ ಅಗತ್ಯವಿರುವ ಸಾಟೆಕ್ಸ್, ಗ್ರೇಡಿಂಗ್, ಮಡ್ಡ ಕ್ಲೀನರ್ ಸೇರಿದಂತೆ ವಿವಿಧ ಆಧುನಿಕ ಯಂತ್ರೋಪಕರಣಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರಲಿವೆ. ಸಂಜೆ ಕಲರ್ಸ್ ಕನ್ನಡ ಖ್ಯಾತಿಯ ಕಲಾವಿದರು ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಆ.14ರಂದು ಅದ್ಧೂರಿ ಚಾಲನೆ

ಆ.14ರಂದು ಸಂಜೆ 5ಕ್ಕೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಕೆ. ಆದಪ್ಪಗೌಡ್ರ ಉದ್ಘಾಟಿಸಲಿದ್ದಾರೆ. ಶರಣಬಸಪ್ಪ ಗುಡಿಮನಿ ಅಧ್ಯಕ್ಷತೆ ವಹಿಸಲಿದ್ದಾರೆ.

ಆ.15ರಂದು ಸಾಧಕರಿಗೆ ಸನ್ಮಾನ ನಡೆಯಲಿದ್ದು, ಆ.16ರಂದು ಬೆಳಿಗ್ಗೆ ರಕ್ತದಾನ ಶಿಬಿರ ಹಾಗೂ ಸಂಜೆ ಜೀವಮಾನ ಸಾಧನೆ, ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಮತ್ತು ಶ್ರೇಷ್ಠ ಮಹಿಳಾ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಉದ್ಯಮ ಕ್ಷೇತ್ರದ ಸಾಧಕರಿಗೆ ಗೌರವ

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಆನಂದ ಪೋತ್ನೀಸ್ ಹಾಗೂ ಈಶಣ್ಣ ಮುನವಳ್ಳಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು.

ಶ್ರೇಷ್ಠ ಉದ್ಯಮಿ ಪ್ರಶಸ್ತಿಗೆ ಕುಮಾರ ವಿ. ಫಟ್ಟದ, ವೀರಣ್ಣ ಸೊನ್ನದ ಹಾಗೂ ವೀರಣ್ಣ ಪವಾಡದ, ಶ್ರೇಷ್ಠ ವರ್ತಕ ಪ್ರಶಸ್ತಿಗೆ ಸುರೇಶಕುಮಾರ ಓಸವಾಲ, ಬಸಪ್ಪ ಶೆಟ್ಟಿಕೇರಿ, ಸಂಗಮೇಶ ಗೌರಿಮಠ ಹಾಗೂ ಗೌತಮ್‌ಚಂದ ಚೋಪ್ರಾ ಆಯ್ಕೆಯಾಗಿದ್ದಾರೆ. ಶ್ರೇಷ್ಠ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ನಿರ್ಮಲಾ ಕೊಳ್ಳಿ ಅವರಿಗೆ ನೀಡಲಾಗುವುದು.

ಮಹಿಳಾ ಉದ್ಯಮಶೀಲತೆಗೆ ವಿಶೇಷ ಒತ್ತು

ಆ.17ರಂದು ಜವಳಿ ವಲಯದ ರಫ್ತು ಉದ್ಯಮಿದಾರರಿಗೆ ಪ್ರೋತ್ಸಾಹ ಕಾರ್ಯಾಗಾರ ನಡೆಯಲಿದೆ. ಸಂಜೆ ಮಹಿಳಾ ಘಟಕದಿಂದ ‘ನವ ಮಹಿಳಾ ಉದ್ಯಮಿದಾರರ ಸಂವಾದ–ಸಮಸ್ಯೆ ಹಾಗೂ ಪರಿಹಾರ’ ಕಾರ್ಯಕ್ರಮ ನಡೆಯಲಿದೆ.

ಆ.18ರಂದು ಬೆಳಿಗ್ಗೆ ಮಹಿಳೆಯರ ಅಡುಗೆ ಸ್ಪರ್ಧೆ ಆಯೋಜಿಸಲಾಗಿದ್ದು, ಸಂಜೆ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ಉತ್ಸವದಲ್ಲಿ ವಿವಿಧ ಕ್ಷೇತ್ರಗಳ ತಜ್ಞರಿಂದ ಉಪನ್ಯಾಸಗಳು, ಉದ್ಯಮಶೀಲತೆ ಕುರಿತ ಕಾರ್ಯಾಗಾರಗಳು ಹಾಗೂ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಜಯದೇವ ಮೆಣಸಗಿ, ಪ್ರಕಾಶ ಉಗಲಾಟ, ಸಿದ್ರಾಮಪ್ಪ ಉಮಚಗಿ, ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ, ಸಹ ಗೌರವ ಕಾರ್ಯದರ್ಶಿ ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಕೋಶಾಧ್ಯಕ್ಷ ಅರವಿಂದ ಕಾಮತ, ಗದಗ ಉತ್ಸವ ಸಮಿತಿ ಚೇರ್ಮನ್ ಮಧುಸೂದನ ಪುಣೇಕರ, ಕೋ-ಚೇರ್ಮನ್ ಮಂಜುನಾಥ ವೀರಲಿಂಗಯ್ಯನಮಠ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗದಗ ಉತ್ಸವ ಕೇವಲ ವಸ್ತು ಪ್ರದರ್ಶನವಲ್ಲ. ಜಿಲ್ಲೆಯ ಉದ್ಯಮಿಗಳು, ವರ್ತಕರು, ಮಹಿಳಾ ಉದ್ಯಮಿಗಳು ಹಾಗೂ ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಜತೆಗೆ ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ವೇದಿಕೆ ಒದಗಿಸುವ ಉದ್ದೇಶ ಹೊಂದಿದೆ.
— ಶರಣಬಸಪ್ಪ ಗುಡಿಮನಿ, ಅಧ್ಯಕ್ಷರು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img