ಧಾರವಾಡ: ಮೊಬೈಲ್ ವಿಚಾರಕ್ಕೆ ಸಂಬಂಧಿಸಿದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ, ಮೃತದೇಹವನ್ನು ಖಾಲಿ ಜಾಗದಲ್ಲಿ ಎಸೆದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತನನ್ನು ಹನುಮಂತ ಅಣ್ಣಿಗೇರಿ ಎಂದು ಗುರುತಿಸಲಾಗಿದೆ. ಮೊಬೈಲ್ ವಿಚಾರಕ್ಕೆ ಹನುಮಂತ ಹಾಗೂ ಯಲ್ಲಪ್ಪ ಬಂಡಿವಡ್ಡರ ನಡುವೆ ಜಗಳ ನಡೆದಿತ್ತು. ಈ ವೇಳೆ ಯಲ್ಲಪ್ಪ ಹನುಮಂತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಆರೋಪಿಗಳು ಹನುಮಂತನ ಮೃತದೇಹವನ್ನು ಧಾರವಾಡದ ಐನಾಕ್ಸ್ ಸಮೀಪದ ಖಾಲಿ ಜಾಗದಲ್ಲಿ ಎಸೆದು ಪರಾರಿಯಾಗಿದ್ದರು.
ಘಟನೆ ಬಳಿಕ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.



