ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹುದ್ದೆ, ಸ್ಥಾನಮಾನಕ್ಕಿಂತ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕತೆ, ಶ್ರದ್ಧೆ ಹಾಗೂ ಸಮರ್ಪಣೆಯಿಂದ ನಿರ್ವಹಿಸುವುದೇ ವ್ಯಕ್ತಿಯ ನಿಜವಾದ ಹಿರಿಮೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಭಾರತಿ ಶಿರ್ಸಿ ಅವರ ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಅಕ್ಷರದ ಜತೆಗೆ ಉತ್ತಮ ವಿಚಾರಗಳ ಬೀಜ ಬಿತ್ತಬೇಕು. ಕನ್ನಡ ಮಾಧ್ಯಮದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂದು ಸ್ವಾಮೀಜಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತಿ ಶಿರ್ಸಿ, ಬಸವೇಶ್ವರ ಶಾಲೆಯಲ್ಲಿ ೨೨ ವರ್ಷಗಳ ಕಾಲ ಸಲ್ಲಿಸಿದ ಸೇವೆ ತಮ್ಮ ಜೀವನದ ಅಮೂಲ್ಯ ಅಧ್ಯಾಯವಾಗಿದೆ. ಸಂಸ್ಥೆಯೊಂದಿಗಿನ ಸಂಬಂಧ ಕೇವಲ ಉದ್ಯೋಗದ ಸಂಬಂಧವಲ್ಲ; ಅದು ಆತ್ಮೀಯ ಬಂಧವಾಗಿದೆ ಎಂದರು.
ರವೀಂದ್ರನಾಥ ದೊಡ್ಡಮೇಟಿ, ಡಾ. ಜಿ.ಕೆ. ಕಾಳೆ ಸೇರಿದಂತೆ ಗಣ್ಯರು ಭಾರತಿ ಶಿರ್ಸಿ ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. ಪ್ರಾಚಾರ್ಯ ವೈ.ಸಿ. ಪಾಟೀಲ, ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
೨೨ ವರ್ಷಗಳ ಸೇವೆ ನನ್ನ ಜೀವನದ ಅಮೂಲ್ಯ ಅಧ್ಯಾಯ. ಸಂಸ್ಥೆಯೊಂದಿಗಿನ ಸಂಬಂಧ ಕೇವಲ ಉದ್ಯೋಗದ ಸಂಬಂಧವಲ್ಲ; ಅದು ಗುರು–ಶಿಷ್ಯರ ಆತ್ಮೀಯ ಬಂಧ.
— ಭಾರತಿ ಶಿರ್ಸಿ, ನಿವೃತ್ತ ಶಿಕ್ಷಕಿ



