ವಿಜಯಸಾಕ್ಷಿ ಸುದ್ದಿ, ಗದಗ: “ಮಕ್ಕಳು, ಯುವಕರು ಹಾಗೂ ಹಿರಿಯರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಉತ್ತಮ ವೇದಿಕೆಯಾಗಿವೆ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಬೆಳೆಯುವುದರ ಜೊತೆಗೆ ಪ್ರತಿಭೆಗೆ ಸೂಕ್ತ ಗೌರವ ದೊರೆಯುತ್ತದೆ” ಎಂದು ಕ್ಯಾಲಿಫೋರ್ನಿಯಾದ ಸಮಾಜ ಸೇವಾ ಇಲಾಖೆಯ ಇಂಜಿನಿಯರ್ ಶ್ರೀಮತಿ ಶೈಲಜಾ ತುಪ್ಪದ ಹೇಳಿದರು.
12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗಾಸನ ಸಮೂಹ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ತಾವು ವಿದ್ಯಾರ್ಥಿಯಾಗಿದ್ದಾಗ ಯೋಗಾಭ್ಯಾಸ ಮಾಡಿ ರಾಜ್ಯಮಟ್ಟದ ಯೋಗಾಸನ ಕ್ರೀಡಾಪಟುವಾಗಿದ್ದೆ. ಈಗ ವಿದೇಶದಲ್ಲಿಯೂ ಯೋಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಯೋಗಕ್ಕೆ ವಿಶ್ವದಾದ್ಯಂತ ಗೌರವವಿದೆ. ಎಲ್ಲರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಿ.ಪಿ. ಕಟ್ಟಿಮನಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಗುರುಗಳಿಗೆ ಸಮಾಜದಲ್ಲಿ ಇನ್ನಷ್ಟು ಗೌರವ ದೊರೆಯುತ್ತದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ಬಾಬಣ್ಣ ಗೋಟಡಕಿ, ಎಸ್.ಸಿ. ಹಿರೇಮಠ, ವಿದ್ಯಾ ಗಂಜಿಹಾಳ, ಸುಮಂಗಲಾ ಹದ್ಲಿ ಹಾಗೂ ಶಾಂತಾ ತುಪ್ಪದ ಉಪಸ್ಥಿತರಿದ್ದರು.
ಸುನಂದಾ ಜ್ಞಾನೋಪಂತರ ಯೋಗ ಪ್ರಾರ್ಥನೆ ನೆರವೇರಿಸಿದರು. ಎಂ.ವಿ. ಕಲಹಾಳ ಸ್ವಾಗತಿಸಿದರು. ಎಸ್.ಎಂ. ಬುರಡಿ ವಂದಿಸಿದರು. ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು.
“ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಅತ್ಯುತ್ತಮ ವೇದಿಕೆಯಾಗಿವೆ.”
ಶ್ರೀಮತಿ ಶೈಲಜಾ ತುಪ್ಪದ



