-
ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಸಕ್ತ ಸಾಲಿನ ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೇಸಿಗೆ ಹೆಚ್ಚಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆಯು ಈಗಾಗಲೇ ನೀಡಿರುವದರಿಂದ ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಿ, ಅಗತ್ಯ ದಾಸ್ತಾನು ಮತ್ತು ಪರಿಹಾರ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್ ತಿಳಿಸಿದರು.
ಅವರು ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ 2026ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಸಂಗ್ರಹಣೆ ಹಾಗೂ ಅತಿಯಾದ ಬಿಸಿಲಿನಿಂದ ಕೈಗೊಳ್ಳುವ ಮುನ್ನಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ ಮಾತನಾಡಿದರು.
ಈಗಾಗಲೇ ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಮನಗುಂಡಿ ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮಗಳಿಗೆ ಬಾಡಿಗೆ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಅಗತ್ಯ ಇರುವ ಮೇವು ದಾಸ್ತಾನು ಹೊಂದಲಾಗಿದೆ. ಬೇಸಿಗೆ ಅವಧಿಯಲ್ಲಿ ಸರಬರಾಜು ಮಾಡಲು ಮುಂದಿನ 28 ವಾರಗಳಿಗೆ ಅಗತ್ಯವಿರುವಷ್ಟು ಮೇವನ್ನು ಜಿಲ್ಲೆಯಲ್ಲಿ ದಾಸ್ತಾನು ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ತಿಳಿಸಿದರು.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಬಿಸಿಗಾಳಿ ಹೆಚ್ಚಾಗಿರಲಿದೆ. ವಿಶೇಷವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಉಷ್ಣಾಂಶವು 35ರಿಂದ 40 ಡಿಗ್ರಿ ಸೆಲ್ಸಿಯಸ್ ಇರುವ ಬಗ್ಗೆ ವರದಿ ಇದೆ. ಈ ಕುರಿತು ನಗರ ಮತ್ತು ಗ್ರಾಮಗಳಲ್ಲಿ ಐಇಸಿ ಕಾರ್ಯ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳು ಇದ್ದು, 13 ವಾರ್ಡ್‌ಗಳಿಗೆ ನಿರಂತರ ನೀರು ಯೋಜನೆಯಡಿ ದಿನದ 24 ಗಂಟೆ ನೀರು ಸರಬರಾಜು ವ್ಯವಸ್ಥೆ ಇದೆ ಎಂದು ಹೇಳಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ಪಶು ಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ಮಹೇಶ ಗಸ್ತಿ, ಜಿ.ಬಿ. ಮಜ್ಜಗಿ, ಸುಧೀರ ಸಾವುಕಾರ, ಬಸವರಾಜ ಹೊಂಕಣನವರ, ಎಮ್.ಜಿ. ದಾಸಪ್ಪನವರ, ರಾಜು ಮಾವರಕರ್ ಬೇಸಿಗೆ ಅವಧಿಯ ಸುರಕ್ಷತಾ ಕ್ರಮಗಳನ್ನು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಮಾಲೋಚಕ ವೆಂಕಟೇಶ ಗುಳ್ಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕಿನ 160 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು 60 ಕೆರೆಗಳು ಇವೆ. ಈ ಪೈಕಿ 40 ಕೆರೆಗಳನ್ನು ಈಗಾಗಲೇ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ನೀರು ತುಂಬಿಸಲಾಗಿದೆ. ಮತ್ತು 10 ಕೆರೆಗಳು ಶೇ. 75ಕ್ಕಿಂತ ಹೆಚ್ಚು ನೀರು ತುಂಬಿವೆ. ನವಲಗುಂದ ತಾಲೂಕಿನ ಗೊಬ್ಬರಗುಂಪಿ ಗ್ರಾಮದ ಕೆರೆ ಹೂಳೆತ್ತುವ ಕಾರ್ಯದ ನಿಮಿತ್ತ ನೀರು ಹರಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಈ ಕೆರೆಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
-



