ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪೂಜ್ಯಗುರು ಅನ್ನದಾನ ಮಹಾಸ್ವಾಮಿಗಳ ದೂರದೃಷ್ಟಿ, ತ್ಯಾಗ ಮತ್ತು ಶಿಕ್ಷಣದ ಮೇಲಿನ ಅಪಾರ ಕಾಳಜಿಯಿಂದ ಆರಂಭವಾದ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯು ಇಂದು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ, ಹೆಣ್ಣುಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಶಾಲಾ ಸಂಸತ್ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
1943ರಲ್ಲಿ ಪೂಜ್ಯಗುರು ಅನ್ನದಾನ ಮಹಾಸ್ವಾಮಿಗಳ ಆಶಯದಂತೆ ಸ್ಥಾಪನೆಯಾದ ಸಂಸ್ಥೆ, ಶಿಕ್ಷಣವನ್ನು ಸಮಾಜ ಪರಿವರ್ತನೆಯ ಸಾಧನವನ್ನಾಗಿ ರೂಪಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ 1972ರಲ್ಲಿ ಆರಂಭವಾದ ಬಾಲಕಿಯರ ಪ್ರೌಢಶಾಲೆ ಗ್ರಾಮೀಣ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿನಿಯರ ಭವಿಷ್ಯ ರೂಪಿಸಿದೆ ಎಂದು ಹೇಳಿದರು.
ಈ ಶಾಲೆಯ ಹಳೆಯ ವಿದ್ಯಾರ್ಥಿನಿಯರು ಶಿಕ್ಷಕಿಯರು, ವೈದ್ಯರು, ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜ ಸೇವೆಯಲ್ಲಿ ತೊಡಗಿರುವುದು ಸಂಸ್ಥೆಯ ಹೆಮ್ಮೆಯಾಗಿದೆ. ಶಿಕ್ಷಣವು ಕೇವಲ ಉದ್ಯೋಗಕ್ಕಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಯುತ ಬದುಕು ರೂಪಿಸುವ ಸಾಧನವಾಗಬೇಕು ಎಂದು ಕರೆ ನೀಡಿದರು.
ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿದ ಎಸ್.ಎ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಕಲೆ, ಸಾಹಿತ್ಯ, ಸಂಗೀತ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಶಾಲಾ ಸಂಸತ್ ಫಲಕವನ್ನು ಉದ್ಘಾಟಿಸಿದ ಅಭಿನವ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಅನಸೂಯಾ ಪಾಟೀಲ, ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಂಸ್ಥಾಪಕರ ದಿನಾಚರಣೆಯನ್ನು ವೀರಣ್ಣ ಹಳ್ಳಿ ನೆರವೇರಿಸಿದರು. ಇದೇ ವೇಳೆ 2005–06ನೇ ಸಾಲಿನ ಹಳೆಯ ವಿದ್ಯಾರ್ಥಿನಿಯರು ಶಾಲೆಗೆ ಪ್ರದರ್ಶನ ಫಲಕವನ್ನು ದೇಣಿಗೆಯಾಗಿ ನೀಡಿ ಉದ್ಘಾಟಿಸಿದರು.
ಶಾಲಾ ಸಂಸತ್ ಸದಸ್ಯರಿಗೆ ಎಸ್. ಶಿವಮೂರ್ತಿ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಸ್.ಎನ್. ಹೂಲಗೇರಿ ವಹಿಸಿದ್ದರು. ಎ.ಟಿ. ಮಳ್ಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಹಳೆಯ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಪಡೆದರು.
“ಅನ್ನದಾನ ಮಹಾಸ್ವಾಮಿಗಳ ಶಿಕ್ಷಣದ ಕನಸು ಇಂದು ಸಾವಿರಾರು ವಿದ್ಯಾರ್ಥಿನಿಯರ ಬದುಕು ಬೆಳಗಿಸುತ್ತಿದೆ. ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂಬುದನ್ನು ನಮ್ಮ ಸಂಸ್ಥೆ ಸಾಬೀತುಪಡಿಸಿದೆ.”
– ರವೀಂದ್ರನಾಥ ದೊಡ್ಡಮೇಟಿ, ಪ್ರಧಾನ ಕಾರ್ಯದರ್ಶಿ, ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿ



