ಪುಣೆ: ನಗರದ ರೈಲು ನಿಲ್ದಾಣದಲ್ಲಿ ಮಾನವೀಯತೆ ಮೀರಿದ ಘಟನೆ ಸಂಭವಿಸಿದೆ. ನಾಲ್ಕು ವರ್ಷದ ಬಾಲಕಿಗೆ ಚಾಕೊಲೇಟ್ ಆಮಿಷ ನೀಡಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಮೂಲದ ಕೂಲಿ ಕಾರ್ಮಿಕ ತನ್ನ ಮಗಳೊಂದಿಗೆ ರೈಲು ಕಾಯುತ್ತಾ ಪ್ಲಾಟ್‌ಫಾರ್ಮ್‌ನಲ್ಲಿ ಕುಳಿತಿದ್ದಾಗ, ಆತ ಟಾಯ್ಲೆಟ್‌ಗೆ ತೆರಳಿದ ಕ್ಷಣದಲ್ಲೇ ಆರೋಪಿ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. ಸಿಸಿಟಿವಿ ದೃಶ್ಯದಲ್ಲಿ ಬಾಲಕಿ ಆತನ ಕೈ ಹಿಡಿದು ಹೋಗುತ್ತಿರುವುದು ಕಂಡುಬಂದಿದೆ.
ನಿಲ್ದಾಣದ ಆವರಣದಲ್ಲಿರುವ ನಿರ್ಜನ ಭಾಗದಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಮಗು ಪತ್ತೆಯಾದ ಬಳಿಕ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ನಾಲ್ಕು ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.
ರೈಲು ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಘಟನೆ ಭದ್ರತಾ ವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.



