ಬಾಗಲಕೋಟೆ: ಮಹಿಳಾ ಸಂಘದ ಹೆಸರಿನಲ್ಲಿ ಸಾವಿರಾರು ಮಹಿಳೆಯರಿಂದ ಹಣ ಸಂಗ್ರಹಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಕೇಳಿಬಂದಿದೆ.
ದುರ್ಗಾದೇವಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ವಿದ್ಯಾ ಹಳ್ಳೂರು ಹಾಗೂ ಕಾರ್ಯದರ್ಶಿ ರಚನಾ ಬಂಟನೂರು ವಿರುದ್ಧ ಹಣ ಕಳೆದುಕೊಂಡ ಮಹಿಳೆಯರು ಆರೋಪ ಮಾಡಿದ್ದಾರೆ.
ದುರ್ಗಾದೇವಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಡಿ ಬೀಳಗಿ ತಾಲೂಕಿನಾದ್ಯಂತ 170ಕ್ಕೂ ಹೆಚ್ಚು ಮಹಿಳಾ ಸಂಘಗಳನ್ನು ಆರಂಭಿಸಲಾಗಿತ್ತು. ವಿವಿಧ ಗ್ರಾಮಗಳ ಸಾವಿರಾರು ಮಹಿಳೆಯರಿಂದ ಪ್ರತಿ ವಾರ 100, 500 ಹಾಗೂ 1,000 ರೂ.ನಂತೆ ಹಣ ಸಂಗ್ರಹಿಸಲಾಗುತ್ತಿತ್ತು ಎನ್ನಲಾಗಿದೆ.
ಮೂರು ವರ್ಷಗಳ ಬಳಿಕ ಹೆಚ್ಚಿನ ಬಡ್ಡಿಯೊಂದಿಗೆ ಹಣ ಹಿಂತಿರುಗಿಸುವುದಾಗಿ ಮಹಿಳೆಯರನ್ನು ನಂಬಿಸಲಾಗಿತ್ತು. ಆದರೆ, ಅವಧಿ ಮುಗಿದರೂ ಹಣ ವಾಪಸ್ ನೀಡಿಲ್ಲ. ಒಂದೊಂದು ಸಂಘಕ್ಕೆ 15ರಿಂದ 20 ಲಕ್ಷ ರೂ.ವರೆಗೆ ವಂಚಿಸಲಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಹಣ ವಾಪಸ್ ಕೇಳಿದ ಮಹಿಳೆಯರಿಗೆ ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆಗಿರುವ ಚೆಕ್‌ಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಪೊಲೀಸರೊಂದಿಗೆ ಸಂಬಂಧವಿದೆ ಎಂದು ಹೇಳಿ ಬೆದರಿಕೆ ಹಾಕಲಾಗಿದೆ ಎಂದು ನೊಂದ ಮಹಿಳೆಯರು ದೂರಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಮಹಿಳೆಯರು ಬೀಳಗಿಯಲ್ಲಿರುವ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಾರ್ಯದರ್ಶಿ ರಚನಾ ಅವರನ್ನು ಕೆಲ ಮಹಿಳೆಯರು ಹಿಡಿದು ಎಳೆದಾಡಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ವಿದ್ಯಾ ಹಳ್ಳೂರು ಹಾಗೂ ರಚನಾ ಬಂಟನೂರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಮಹಿಳೆಯರಿಂದ ಸಂಗ್ರಹಿಸಿದ್ದ ಹಣವನ್ನು ಬೇರೆಡೆ ಹೂಡಿಕೆ ಮಾಡಿರುವುದರಿಂದ ಹಣ ಹಿಂತಿರುಗಿಸಲು ವಿಳಂಬವಾಗಿದೆ. ಆದಷ್ಟು ಬೇಗ ಹಣ ವಾಪಸ್ ನೀಡುವುದಾಗಿ ಇಬ್ಬರು ಹೇಳಿರುವುದಾಗಿ ತಿಳಿದುಬಂದಿದೆ.
ಕೂಲಿ ಕೆಲಸ ಮಾಡಿ ಕಷ್ಟಪಟ್ಟು ಉಳಿಸಿದ ಹಣವನ್ನು ಸಂಘಕ್ಕೆ ಕಟ್ಟಿದ್ದ ಸಾವಿರಾರು ಮಹಿಳೆಯರು ಹಣ ವಾಪಸ್ ಸಿಗದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀಳಗಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.



