ಹಾಸನ: ನಗರದ ಕರಿಗೌಡ ಕಾಲೊನಿಯಲ್ಲಿ ವೃದ್ಧ ದಂಪತಿ ಡೇನಿಯಲ್ ಮತ್ತು ಪತ್ನಿ ಮೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ಹಾರೇಹೊಸೂರು ಗ್ರಾಮದ ಡೇನಿಯಲ್, ಐವತ್ತು ವರ್ಷಗಳ ಹಿಂದೆ ಮೇರಿಯನ್ನು ವಿವಾಹ ಮಾಡಿಕೊಂಡಿದ್ದು, ನೆಲ್ಸನ್ ಮತ್ತು ವಿಲ್ಸನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಡೇನಿಯಲ್ ಕಷ್ಟಪಟ್ಟು ಕಾಫಿ ತೋಟ, ಮನೆ ಮತ್ತು ಆಸ್ತಿ ಮಾಡಿ ಮಕ್ಕಳಿಗೆ ಒಳ್ಳೆಯ ಜೀವನ ಒದಗಿಸಿದ್ದರೂ, ಇತ್ತೀಚಿನ ಕೆಲವು ವರ್ಷಗಳಿಂದ ಮಕ್ಕಳು ವಯೋವೃದ್ಧ ತಂದೆ-ತಾಯಿಯನ್ನು ನಿರ್ಲಕ್ಷಿಸಿದ್ದರು.
ಮಕ್ಕಳ ನಿರ್ಲಕ್ಷ್ಯದಿಂದ ಬೇಸತ್ತ ದಂಪತಿ ಕೆಲವು ದಿನಗಳಿಂದ ವೃದ್ಧಾಶ್ರಮದಲ್ಲಿ ಉಳಿಯಲು ಪ್ರಯತ್ನಿಸಿದ್ದರು. ಆದರೆ ಮನಸ್ಸಿನ ತೀವ್ರ ಒತ್ತಡದಿಂದ ಅವರು, ಬಸ್ ಮೂಲಕ ಬಸ್ ಸ್ಟ್ಯಾಂಡ್ ಬಳಿ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡರು. ಮೃತ ದಂಪತಿಯನ್ನು ಗುರುತಿಸಿ ಮಕ್ಕಳಿಗೆ ಮಾಹಿತಿ ನೀಡಲಾಗಿತ್ತು, ಆದರೆ ಅವರು ಮೃತದೇಹಗಳನ್ನು ಕೊಂಡೊಯ್ಯಲು ಹಿಂದೇಟು ಹಾಕಿದ್ದರು. ಕಡೆಗೆ ಸಂಬಂಧಿಕರು ಹಾಗೂ ರೈಲ್ವೇ ಪೊಲೀಸರು ತರಾಟೆಗೆ ತೆಗೆದಕೊಂಡಿದ್ದರಿಂದ ಶವಾಗಾರದ ಬಳಿ ಬಂದು ಒಂದು ಹನಿ ಕಣ್ಣೀರು ಹಾಕದೆ ತಂದೆ ಮೇಲೆಯೇ ಆರೋಪಿಸಿದ್ದಾರೆ.
ತಂದೆ ಮದ್ಯ ಸೇವಿಸುತ್ತಿದ್ದರು. ಇದರಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಆ ಕಾರಣದಿಂದ ಅವರೇ ಮನೆ ಬಿಟ್ಟು ಹೋಗಿದ್ದರು ಎಂದು ಆರೋಪ ಮಾಡಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



