ಬೆಂಗಳೂರು: ಸಿಎಂಎಸ್ ಕಂಪನಿ ಮಾಜಿ ಸಿಬ್ಬಂದಿ ಎಟಿಎಂ ದರೋಡೆ ಪ್ರಕರಣದ ಸಂಚಲನ ಇನ್ನೂ ತಣ್ಣಗಾಗುವ ಮುನ್ನವೇ ನಗರದಲ್ಲಿ ಮತ್ತೊಂದು ಎಟಿಎಂ ದರೋಡೆಗೆ ಯತ್ನ ನಡೆದಿದೆ.
ಫೆಬ್ರವರಿ 10ರಂದು ಮಧ್ಯರಾತ್ರಿ, ಬೆಂಗಳೂರು ನಗರದ ಇಂದಿರಾನಗರ ಡಬಲ್ ರೋಡ್ ಬಳಿಯ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ನುಗ್ಗಿದ ಆರೋಪಿ ಶಟ್ಟರ್ ಮುಚ್ಚಿ ದರೋಡೆಗೆ ವಿಫಲ ಯತ್ನ ನಡೆಸಿದ್ದಾನೆ.
ನೇಪಾಳ ಮೂಲದ ರಾಜೇಂದ್ರ ಸಿಂಗ್ (23) ಕಟ್ಟಿಂಗ್ ಮಷೀನ್ ಬಳಸಿ ಎಟಿಎಂ ಯಂತ್ರ ಒಡೆದು ಹಣ ದೋಚಲು ಯತ್ನಿಸಿದ್ದ. ಅಲ್ಲದೆ ಸಿಸಿಟಿವಿ ಕ್ಯಾಮೆರಾಗಳನ್ನು ಬಟ್ಟೆ ಮತ್ತು ಟೇಪ್ ಬಳಸಿ ಮುಚ್ಚಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ. ಆದರೆ ಯಂತ್ರ ಒಡೆಯಲು ಸಾಧ್ಯವಾಗದೆ ಹಣ ಸಿಗದೆ ಖಾಲಿಹಸ್ತದಿಂದ ಪಾರಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಇಂದಿರಾನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧನದ ಬಳಿಕ ಆರೋಪಿ ನಾಗಾರ್ಜುನ ಹೋಟೆಲ್‌ನ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.
ನಗರದಲ್ಲಿ ಎಟಿಎಂ ದರೋಡೆ ಯತ್ನಗಳು ಮರುಕಳಿಸುತ್ತಿರುವುದು ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.



