ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಶೌಚಾಲಯದೊಳಗೆ ಬಾಂಬ್ ಬೆದರಿಕೆ ಚೀಟಿ ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗುರುವಾರ ಬೆಂಗಳೂರಿನಿಂದ ಅಹಮದಾಬಾದ್ಗೆ ತೆರಳಬೇಕಿದ್ದ ಇಂಡಿಗೋ 6E-6423 ವಿಮಾನದ ಶೌಚಾಲಯದಲ್ಲಿ ಬೆದರಿಕೆ ಚೀಟಿ ಪತ್ತೆಯಾಗಿದೆ. “ದಯವಿಟ್ಟು ಹೋಗಬೇಡಿ, ಬಾಂಬ್ ಇದೆ” ಎಂದು ಚೀಟಿಯಲ್ಲಿ ಬರೆಯಲಾಗಿತ್ತು ಎಂದು ತಿಳಿದುಬಂದಿದೆ.
ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದ್ದು, ತಕ್ಷಣ ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಗತ್ಯ ತಪಾಸಣೆ ಹಾಗೂ ಅನುಮತಿ ಪ್ರಕ್ರಿಯೆಗಳಿಂದಾಗಿ ಸಂಜೆ 7.30ಕ್ಕೆ ಹೊರಡಬೇಕಿದ್ದ ವಿಮಾನ ಸುಮಾರು ಐದು ಗಂಟೆ ತಡವಾಗಿ ಟೇಕ್ ಆಫ್ ಆಗಿದೆ.
ವಿಮಾನಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್ (ATC) ಕ್ಲಿಯರೆನ್ಸ್ ನೀಡಿದೆ. ಪ್ರಾಥಮಿಕ ತನಿಖೆಯಲ್ಲಿ ಓರ್ವ ಪ್ರಯಾಣಿಕನೇ ಈ ಬೆದರಿಕೆ ಚೀಟಿ ಬರೆದು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



