ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಶನಿವಾರ ಮಧ್ಯರಾತ್ರಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದರಿಂದ ಬಹುತೇಕ ಕಾರ್ಯಕರ್ತರಲ್ಲಿ ಅಸಮಾಧಾನ ಮಡುಗಟ್ಟಿದೆ.
ಪ್ರತಿನಿತ್ಯ ನೂರಾರು ಜನ ಕಾರ್ಯಕರ್ತರು ಮನೆ ಬಳಿ ಬರುತ್ತಿದ್ದರು. ಅನೇಕ ಕೆಲಸ ಕಾರ್ಯಗಳ ಬೇಡಿಕೆಯನ್ನು ಹೊತ್ತು ತರುವ ಸಾರ್ವಜನಿಕರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮನೆ ಮುಂದೆ ತುಂಬಿರುತ್ತಿದ್ದರು. ಆದರೆ ರವಿವಾರ ಮನೆಯ ಸುತ್ತಲೂ ಖಾಲಿ ಖಾಲಿ ಆಗಿದೆ. ಮನೆಯ ಕೆಲಸಗಾರರನ್ನು ಹೊರತುಪಡಿಸಿ ಕುಟುಂಬಸ್ಥರು ಬೇರೆಕಡೆ ಸ್ಥಳಾಂತರವಾಗಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಶಾಸಕರ ಪತ್ನಿ ಸರೋಜಾ ಮಾನಸಿಕ ಖಿನ್ನತೆಗೆ ಒಳಗಾಗಿ ಊಟವಿಲ್ಲದೆ, ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಶಾಸಕ ಚಂದ್ರು ಲಮಾಣಿ ಎಂದಿನಂತೆ ನಿಗದಿತ ಕಾರ್ಯಕ್ರಮಗಳ ಪ್ರಕಾರ ಶನಿವಾರ ಮುಂಜಾನೆ 7.30ರಿಂದಲೇ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸುಮಾರು 1 ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ಆಲಿಸಿದ ಅವರು ನಂತರ ಮನೆಗೆ ತೆರಳಿ 10 ಗಂಟೆಯ ಹೊತ್ತಿಗೆ ದೇವಸ್ಥಾನಕ್ಕೆ ಮರಳಿ ಬಂದು ಪುಲಿಗೆರೆ ಉತ್ಸವದ ನಿಮಿತ್ತ ನಡೆದ ಸೋಮೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಸ್ವತಃ ಪಲ್ಲಕ್ಕಿಯನ್ನು ಹೊತ್ತು ಸೇವೆ ಸಲ್ಲಿಸಿದ್ದರು. ನಂತರ ಅಲ್ಲಿಂದ ತೆರಳಿದ ಅವರು ಆಸ್ಪತ್ರೆಯಲ್ಲಿ ವಿ.ಜಿ. ರಾಮ್‌ಜಿ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಿದ್ದರು.
ಶನಿವಾರ ಮಧ್ಯಾಹ್ನ 1.30ರಿಂದ 2 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿದ್ದಾಗಲೇ ಲೋಕಾಯುಕ್ತ ದಾಳಿ ನಡೆದಿದ್ದು, ಏಕಾಏಕಿ ನಡೆದ ದಾಳಿಯಿಂದ ಅವರು ಆಪ್ತ ಕಾರ್ಯದರ್ಶಿಗಳಾದ ಮಂಜುನಾಥ ವಾಲ್ಮೀಕಿ ಮತ್ತು ಗುರು ಅವರು ಸಹ ಈ ಘಟನೆಯಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿಂದ ಪ್ರಾರಂಭವಾದ ಲೋಕಾಯುಕ್ತ ತನಿಖೆ ಸುಮಾರು 12 ಗಂಟೆಗಳ ಕಾಲ, ಮಧ್ಯರಾತ್ರಿ 2 ಗಂಟೆಯವರೆಗೂ ನಡೆದು ಅಲ್ಲಿಂದ ಶಾಸಕ ಡಾ. ಚಂದ್ರು ಲಮಾಣಿಯವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಗದುಗಿಗೆ ತೆರಳಿದರು.
ಶನಿವಾರ ಮಧ್ಯಾಹ್ನ ಶಾಸಕರ ಮೇಲೆ ಲೋಕಾಯುಕ್ತ ದಾಳಿ ನಡೆದ ಸುದ್ದಿ ಹರಡುತ್ತಿದ್ದಂತೆ ಸುದ್ದಿ ತಿಳಿದ ಬಿಜೆಪಿಯ ನೂರಾರು ಕಾರ್ಯಕರ್ತರು, ಮುಖಂಡರು ಜಮಾಯಿಸಿ ಶಾಸಕರ ಮೇಲೆ ಷಡ್ಯಂತ್ರದಿಂದ ಅವರನ್ನು ಸಿಲುಕಿಸುವ ಕಾರ್ಯವನ್ನು ಮಾಡಲಾಗಿದೆ, ದಲಿತ ಮುಖಂಡರನ್ನು ತುಳಿಯುವ ಕಾರ್ಯ ಇದಾಗಿದೆ, ಶಾಸಕರು ಅಮಾಯಕರು ಎಂದು ಆಕ್ರೋಶ ಹೊರಹಾಕಿದರು.
ಸಚಿವ ಎಚ್.ಕೆ. ಪಾಟೀಲರೇ ಇದಕ್ಕೆ ಕಾರಣ, ಅವರಿಂದಲೇ ಈ ಹೇಯ ಕೃತ್ಯ ನಡೆದಿದೆ, ಕಾನೂನು ಸಚಿವರಿಂದಲೇ ಕಾನೂನು ಉಲ್ಲಂಘನೆಯಾಗುತ್ತಿದೆ, ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೋರಾಗಿ ಕೂಗುತ್ತಿದ್ದರು. ಇದು ಬಂಜಾರ ಸಮಾಜದ ಯುವ ಮುಖಂಡ ಬೆಳೆಯುತ್ತಿರುವದನ್ನು ಸಹಿಸಲಾಗದವರ ಕಾರ್ಯ ಎಂದು ಆಕ್ರೋಶದಿಂದ ಕೂಗಿದರು. ಮಧ್ಯರಾತ್ರಿ ಶಾಸಕರನ್ನು ಹೊರಕ್ಕೆ ಕರೆತರುತ್ತಿದ್ದಂತೆ ಕಾರ್ಯಕರ್ತರ ಅಕ್ರೋಶ ಮುಗಿಲುಮುಟ್ಟಿತ್ತು. ಪೊಲೀಸ್ ಅಧಿಕಾರಿಗಳು, ನೂರಾರು ಪೊಲೀಸ್ ಸಿಬ್ಬಂದಿಗಳು ಪರಿಸ್ಥಿತಿ ನಿಭಾಯಿಸಿದರು.



