ವಿಜಯಸಾಕ್ಷಿ ಸುದ್ದಿ, ಧಾರವಾಡ: ಭೂಮಿಯ ನೈಸರ್ಗಿಕ ಅವನತಿಯನ್ನು ನಿಲ್ಲಿಸುವುದು ಮತ್ತು ಮಾನವರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಭವಿಷ್ಯವನ್ನು ನಿರ್ಮಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಮತ್ತು ವರ್ಲ್ಡವೈಲ್ಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್-ಇಂಡಿಯಾ) ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದ 5 ಸಾವಿರ ಸರ್ಕಾರಿ ಶಾಲೆಗಳಲ್ಲಿ 2025-26ನೇ ಸಾಲಿನಲ್ಲಿ ಮಿಷನ್ ಪ್ರಕೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಆಯೋಜಿಸಲಾಗಿತ್ತು.
ಮಿಷನ್ ಪ್ರಕೃತಿ ಕಾರ್ಯಕ್ರಮವು ಶಿಕ್ಷಕರ ಸಹಕಾರದೊಂದಿಗೆ ವಿದ್ಯಾರ್ಥಿಗಳೇ ನಡೆಸುವ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಶಾಲೆ, ಮನೆ ಮತ್ತು ಸಮುದಾಯಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜವಾಬ್ದಾರಿಯುತ ಅಭ್ಯಾಸಗಳನ್ನು ಪ್ರಾಯೋಗಿಕವಾಗಿ ಮಾಡಿ ತಿಳಿದುಕೊಂಡು ಅನುಷ್ಠಾನ ಮಾಡುವುದಾಗಿದೆ. ಈ ಕಾರ್ಯಕ್ರಮವು ಐದು ಪ್ರಮುಖ ಕ್ಷೇತ್ರಗಳಾದ ಜೀವ ವೈವಿಧ್ಯ, ನೀರು, ತ್ಯಾಜ್ಯ, ಆಹಾರ ಮತ್ತು ಶಕ್ತಿ ಎಂಬ ವಿಷಯಗಳ ಅಡಿಯಲ್ಲಿ ಮಕ್ಕಳು ಪ್ರಾಯೋಗಿಕವಾಗಿ ಶಾಲೆ ಹಾಗೂ ಸಮುದಾಯದ ಆಡಿಟ್ ಕೈಗೊಂಡು ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಗುರುತಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುವುದು ಮತ್ತು ಪರಿಹಾರೋಪಾಯಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಸಂರಕ್ಷಣೆ ಕುರಿತು ಜವಾಬ್ದಾರಿ ಮೂಡಿಸುವುದಾಗಿದೆ.
ಮಕ್ಕಳು ಕೈಗೊಂಡ ಎಲ್ಲಾ ಕಾರ್ಯಗಳ ಮಾಹಿತಿಯನ್ನು ಸ್ಯಾಟ್ಸ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಪ್ಲೋಡ್ ಮಾಡಲಾದ ಎಲ್ಲಾ ಶಾಲೆಗಳ ಮಾಹಿತಿಯನ್ನು ಮೌಲ್ಯಮಾಪನ ಕೈಗೊಂಡ ನಂತರ 5 ಸಾವಿರ ಶಾಲೆಗಳ ಪೈಕಿ 10 ಉತ್ತಮ ಕಾರ್ಯ ನಿರ್ವಹಣೆ ಮಾಡಿದ ಶಾಲೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಯಿತು. ಈ ಪೈಕಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಡಳ್ಳಿ ಕೂಡ ಪ್ರಶಸ್ತಿ ಪಡೆದುಕೊಂಡಿದ್ದು, ಬೆಂಗಳೂರಿನ ವಿಕಾಸ ಸೌಧದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಡಯಟ್‌ನ ಪ್ರಾಚಾರ್ಯ ಬಸವರಾಜ ನಾಲತವಾಡ, ಮಿಷನ್ ಪ್ರಕೃತಿ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಡಯಟ್‌ನ ಉಪನ್ಯಾಸಕರಾದ ಪ್ರಕಾಶ ಅಂಗಡಿ, ಡಯಟ್‌ನ ಎಲ್ಲಾ ಹಿರಿಯ ಉಪನ್ಯಾಸಕರು, ಕಲಘಟಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ ದೇವಿ ಸಜ್ಜನ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪಾಂಡುರಂಗ ಪೂಜೇರಿ, ದುಮ್ಮವಾಡ ಕ್ಲಸ್ಟರ್ ಸಿಆರ್‌ಪಿ ಪ್ರಶಾಂತ್ ರೆಡ್ಡೇರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು, ದುಮ್ಮವಾಡ ಗ್ರಾಮದ ಸಮಸ್ತ ನಾಗರಿಕರು, ಹಿರಿಯರು ಮಿಷನ್ ಪ್ರಕೃತಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಪ್ರಶಸ್ತಿಯನ್ನು ಶಾಲೆಯ ಹಸಿರುಪಡೆಯ ಮಕ್ಕಳು, ಶಾಲಾ ನೋಡಲ್ ಶಿಕ್ಷಕಿಯರಾದ ಪ್ರತಿಭಾ ದೊಡ್ಡಮನಿ, ಮುಖ್ಯೋಪಾಧ್ಯಾಯ ಎಮ್.ಎ. ಸುಂಕದ, ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು, ಮಿಷನ್ ಪ್ರಕೃತಿ ಕಾರ್ಯಕ್ರಮದ ತಾಲೂಕಾ ನೋಡಲ್ ಅಧಿಕಾರಿ ಸುಜಾತ ಚವ್ಹಾಣ ಸ್ವೀಕರಿಸಿದರು. ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು, ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಗುಣಮಟ್ಟ ಹಾಗೂ ಡಬ್ಲ್ಯುಡಬ್ಲ್ಯುಎಫ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



