ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಸಾಂಪ್ರದಾಯಿಕವಾಗಿ ಬೆಳೆಯುತ್ತಿರುವ ಬೀಜಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು, ಮೊಳಕೆ ಪರೀಕ್ಷೆ ಮಾಡಿಸುವುದು, ತಳಿಗಳನ್ನು ಸಂರಕ್ಷಿಸಿ ಇತರೆ ಆಸಕ್ತಿಯುತ ರೈತರೊಂದಿಗೆ ಅಭಿವೃದ್ಧಿಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಚೇತನಾ ಪಾಟೀಲ ಹೇಳಿದರು.
ಕೃಷಿ ಇಲಾಖೆ ಗದಗ ಹಾಗೂ ಐಸಿಎಆರ್ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಹಯೋಗದೊಂದಿಗೆ `ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ’ ಕಾರ್ಯಕ್ರಮದಡಿ ಒಂದು ದಿನದ ರೈತರ ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕರಾದ ಸೀಮಾ ಸವಣೂರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಭಾರತವು ಕೃಷಿ ಪರಂಪರೆ ಮತ್ತು ಜೈವಿಕ ವೈವಿಧ್ಯದಲ್ಲಿ ವಿಶ್ವದ ಪ್ರಮುಖ ರಾಷ್ಟ್ರವಾಗಿದ್ದು, ಈ ಪರಂಪರೆಯ ಹೃದಯವಾಗಿರುವುದು ಶತಮಾನಗಳಿಂದ ರೈತರು ಉಳಿಸಿಕೊಂಡು ಬಂದಿರುವ ಪಾರಂಪರಿಕ ಬೀಜಜಾತಿಗಳು. ಇವು ಸ್ಥಳೀಯ ಹವಾಮಾನ, ಮಣ್ಣಿನ ಸ್ವಭಾವ ಮತ್ತು ಸಾಂಸ್ಕೃತಿಕ ಅಗತ್ಯಗಳಿಗೆ ಹೊಂದಿಕೊಂಡು ಅಭಿವೃದ್ಧಿಯಾಗಿರುವ ಅಮೂಲ್ಯ ಕೃಷಿ ಸಂಪತ್ತುಗಳಾಗಿದ್ದು, ಇವುಗಳನ್ನು ಸಂರಕ್ಷಿಸಿ ಅಭಿವೃದ್ಧಿ ಮಾಡುವುದಕ್ಕಾಗಿ `ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ’ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು 2024-25ನೇ ಸಾಲಿನಿಂದ ಐದು ವರ್ಷದವರೆಗೆ ಕೈಗೊಂಡಿದೆ ಎಂದು ತಿಳಿಸಿದರು.
ತಾಂತ್ರಿಕ ಅಧಿವೇಶನದಲ್ಲಿ ಭಾಗವಹಿಸಿದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ. ಕಲಾವತಿ ಮಾತನಾಡಿ, ಸಾಂಪ್ರದಾಯಿಕ ತಳಿಗಳ ಸಂರಕ್ಷಣೆ ಮಹತ್ವ, ಗುಣಧರ್ಮಗಳು ಹಾಗೂ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ಡಾ. ಬಿ.ಎನ್. ಮೊಟಗಿ ದೇಸಿ ತಳಿಗಳ ಸಂರಕ್ಷಣೆ ಹಾಗೂ ಬೀಜೋತ್ಪಾದನೆ ತಾಂತ್ರಿಕತೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಡಾ. ಸಂಗಶೆಟ್ಟಿ ಕುಸುಬೆ ಬೆಳೆಯ ಬಗ್ಗೆ ಹಾಗೂ ಡಾ. ಬಸವರಾಜ ಏಣಗಿ ಜಿಲ್ಲೆಯ ಪ್ರಮುಖ ದೇಸಿ ಬೆಳೆಗಳಾದ ಹೆಸರು, ಗೋಧಿ ಹಾಗೂ ಜೋಳದ ದೇಸಿ ಬೀಜ ಸಂರಕ್ಷಣೆ ಹಾಗೂ ವೈಜ್ಞಾನಿಕ ಬೇಸಾಯ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ, ರೈತರ ಸಮಸ್ಯೆಗಳು-ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಿಂದ ಮುಖ್ಯ ದೇಸಿ ಬೆಳೆಗಳಾದ ಹುರಪಲು, ನವಣೆ, ಹಾಲ ನವಣೆ, ನಂದಿಹಾಳ ಜೋಳ, ಮಾಲದಂಡೆ ಜೋಳ, ದುಂಡು ತೆನೆ ಜೋಳ, ಅಳ್ಳಿನ ಜೋಳ, ಕೆಂಪು ಜೋಳ, ನೆರಳೆ ಬಣ್ಣದ ಗೋಧಿ, ಕೆಂಪು ಗೋಧಿ, ಕಪ್ಪು ಗೋಧಿ, ಜವಾರಿ ತೊಗರಿ, ಜವಾರಿ ಹುರುಳಿ, ಕುಸುಬೆ, ಪುಂಡೆ ಇತ್ಯಾದಿ ದೇಸಿ ಬೀಜಗಳನ್ನು ತೆನೆ, ಹೂ ಇತ್ಯಾದಿಗಳ ಮುಖಾಂತರ ಆಕರ್ಷಕವಾಗಿ ಪ್ರದರ್ಶಿಸಲಾಗಿತ್ತು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಾಗವಹಿಸಿದ ದೇಸಿ ತಳಿಗಳನ್ನು ಬೆಳೆದು ಸಂರಕ್ಷಿಸಿ ಬೆಳೆಯುತ್ತಿರುವ ಪ್ರಗತಿಪರ ರೈತರಾದ ಮೃತ್ಯುಂಜಯ ವಸ್ತ್ರದ, ವೀರೇಶ ನೆಗಲಿ, ಉಮೇಶಗೌಡ ಪಾಟೀಲ, ಅಂದಪ್ಪ ಅಂಗಡಿ ಹಾಗೂ ಮಲ್ಲಯ್ಯ ಗುರುಬಸಪ್ಪನವರಮಠ ಇವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ನೇತ್ರಾವತಿ ಪಟ್ಟೇದ ನಿರೂಪಿಸಿದರು. ತರಬೇತಿಯಲ್ಲಿ ಆತ್ಮ ಹಾಗೂ ಎನ್ಎಫ್ಎಸ್ಎಮ್ ಯೋಜನೆಯ ಸಿಬ್ಬಂದಿಗಳು ಹಾಜರಿದ್ದರು. ಮಂಜುನಾಥ ಭರಮಗೌಡರ ವಂದಿಸಿದರು.
ಉಪ ಕೃಷಿ ನಿರ್ದೇಶಕರಾದ ಸ್ಪೂರ್ತಿ ಜಿಎಸ್ ಮಾತನಾಡುತ್ತಾ, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಿಂದ 38 ಜನ ದೇಸಿ ತಳಿಗಳನ್ನು ಬೆಳೆಯುವ ರೈತರನ್ನು ಗುರುತಿಸಿ ಸದರಿ ರೈತರಿಂದ 52 ದೇಸಿ ತಳಿಗಳನ್ನು ಮೂಲ ಸಮೀಕ್ಷೆಯ ಮೂಲಕ ಸಂಗ್ರಹಿಸಿ, ಜೀನ್ ಬ್ಯಾಂಕ್ಗೆ ಸಂರಕ್ಷಿಸಿ ಅಭಿವೃದ್ಧಿಪಡಿಸಲು ಕಳುಹಿಸಲಾಗಿದೆ ಎಂದು ತಿಳಿಸಿದರು.



