ವಿಜಯಸಾಕ್ಷಿ ಸುದ್ದಿ, ಹೊಳೆಆಲೂರು: ಹೊಳೆಆಲೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಭವನದಲ್ಲಿ ವೈದ್ಯಾಧಿಕಾರಿಗಳ ಕೊರತೆ, ಸಮರ್ಪಕ ಔಷಧಿ ಹಾಗೂ ಮೂಲಸೌಕರ್ಯಗಳ ಅಭಾವ ಇರುವುದನ್ನು ಯುವ ಕರ್ನಾಟಕ ವೇದಿಕೆ ಖಂಡಿಸಿದೆ.
ಯುವ ಕರ್ನಾಟಕ ವೇದಿಕೆಯ ಗದಗ ಜಿಲ್ಲಾ ಅಧ್ಯಕ್ಷ ಎಂ.ಎಚ್. ನದಾಫ್ ಮಾತನಾಡಿ, ಹೊಳೆಆಲೂರು ಸರ್ಕಾರಿ ಆಸ್ಪತ್ರೆ ಸುತ್ತಮುತ್ತಲಿನ 21 ಗ್ರಾಮಗಳ ಜನರಿಗೆ ಪ್ರಮುಖ ಆಸ್ಪತ್ರೆಯಾಗಿದ್ದು, ಪ್ರತಿನಿತ್ಯ 100ರಿಂದ 150 ರವರೆಗೆ ಓಪಿಡಿ ನಡೆಯುತ್ತದೆ. ಆದರೆ ಇಲ್ಲಿ ಒಬ್ಬರೇ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.
ಹೆರಿಗೆ ಸೇರಿದಂತೆ ವಿವಿಧ ಚಿಕಿತ್ಸೆಗಳಿಗಾಗಿ ಗ್ರಾಮೀಣ ಭಾಗದ ಜನರು ಆಸ್ಪತ್ರೆಗೆ ಬರುತ್ತಿದ್ದರೂ ಸಮರ್ಪಕ ವೈದ್ಯರು, ಸ್ಟಾಫ್ ನರ್ಸ್‌ಗಳು, ಔಷಧಿಗಳು ಹಾಗೂ ಲಸಿಕೆಗಳ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುಮಾರು ಆರು ತಿಂಗಳ ಹಿಂದೆ ಸಮುದಾಯ ಆರೋಗ್ಯ ಭವನ ಉದ್ಘಾಟನೆಗೊಂಡಿದ್ದರೂ ಸಮರ್ಪಕ ಚಿಕಿತ್ಸೆ ವ್ಯವಸ್ಥೆ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಕ್ಷಣ ಗಮನಹರಿಸಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಆಸ್ಪತ್ರೆ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯುವ ಕರ್ನಾಟಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹಾದಿಮನಿ, ನಿಂಗಪ್ಪ ಹಾದಿಮನಿ, ಮಾರುತಿ, ಶರೀಫ್ ನದಾಫ್, ರಾಜು ಹೊಂಬಾಳ, ಬಾಬು ಕಾತರಕಿ, ನಯಿಮ್ ನದಾಫ್, ನಿಯಾಜ್ ಮುಲ್ಲಾ, ಹನುಮಂತ ಗಾಡಗೋಳಿ, ಅಶೋಕ್ ಮುಂದಿನಮನಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



