ಧಾರವಾಡ: ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿಸುತ್ತೇನೆಂದು ಹೇಳಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಮೋಸ ಮಾಡಿದ ಆರೋಪ ಕೇಳಿಬಂದಿದೆ. ಈ ಘಟನೆ ಧಾರವಾಡದಲ್ಲಿ ನಡೆದಿದೆ.
ನಗರದ ಶಿವನಗರ ನಿವಾಸಿ 10ನೇ ತರಗತಿ ವಿದ್ಯಾರ್ಥಿ ಅಭಿಷೇಕ್‌ಗೆ ಧಾರವಾಡದ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ್ ಪ್ರಶ್ನೆಪತ್ರಿಕೆ ಲೀಕ್ ಮಾಡಿ ಪಾಸ್ ಮಾಡಿಸುತ್ತೇನೆಂದು ನಂಬಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ತನ್ನ ಮಗನ ಕಾಲೇಜು ಫೀಸ್ ಕಟ್ಟಬೇಕಿದೆ, ಮನೆಯಲ್ಲಿರುವ ಬಂಗಾರವನ್ನು ತಂದುಕೊಡು ಎಂದು ಶಿಕ್ಷಕ ಕೇಳಿದ್ದಾನೆ ಎನ್ನಲಾಗಿದೆ.
ಮೊದಲಿಗೆ ನಿರಾಕರಿಸಿದ್ದ ವಿದ್ಯಾರ್ಥಿ, ಬಳಿಕ ಶಿಕ್ಷಕನ ಮಾತಿಗೆ ಮಣಿದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಡಿಯೋ ಕಾಲ್ ಮೂಲಕ ಅಲ್ಮೇರಾದಲ್ಲಿ ಇಟ್ಟಿದ್ದ 82 ಗ್ರಾಂ ಬಂಗಾರವನ್ನು ತೆಗೆದುಕೊಂಡು ಶಿಕ್ಷಕನಿಗೆ ನೀಡಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯ ತಿಳಿದ ನಂತರ ಆತಂಕಗೊಂಡ ಅಭಿಷೇಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಅವನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿದ್ಯಾರ್ಥಿ ಬಳಿ ಚಿನ್ನ ಪಡೆದು ಬ್ಯಾಂಕ್‌ನಲ್ಲಿ ಅಡವಿಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ತೋರಿಸಿದರೂ ಪ್ರಕರಣ ದಾಖಲಿಸಲು ಧಾರವಾಡ ಉಪನಗರ ಪೊಲೀಸರು ಹಿಂದೇಟು ಹಾಕಿದ್ದಾರೆ ಎಂಬುದು ಪೋಷಕರ ಆರೋಪ.
ಎನ್. ಶಶಿಕುಮಾರ್ ಪೊಲೀಸ್ ಕಮಿಷನರ್ ಪ್ರಕರಣ ದಾಖಲಿಸಲು ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಸದ್ಯ ಪೋಷಕರು ಉಪನಗರ ಠಾಣೆಗೆ ದೂರು ನೀಡಿದ್ದಾರೆ.



