ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಮಿಲ್ ಆವರಣದಲ್ಲಿ ತಾಲೂಕಾ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ವಿಶೇಷ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಹಿರಿಯ ನಾಗರಿಕರಿಗೆ ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿ, ಹಿರಿಯರು ಸಮಾಜದ ಆಧಾರ ಸ್ತಂಭಗಳಿದ್ದಂತೆ. ಅವರಿಗಿರುವ ಜ್ಞಾನ, ಅನುಭವ ಈಗಿನವರಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ವಯಸ್ಸಾಗುತ್ತಿದ್ದಂತೆ ಅವರನ್ನು ಮಕ್ಕಳು ಕಡೆಗಣಿಸುವ ಕಾರ್ಯಗಳು ಬಹಳಷ್ಟು ಕಡೆಗಳಲ್ಲಿ ಕಾಣುತ್ತಿರುವುದು ವಿಷಾದದ ಸಂಗತಿಯಾಗಿದೆ. ಅವರ ಕೊನೆಗಾಲದಲ್ಲಿಯೂ ಸಹ ಅವರ ಬೇಡಿಕೆಗಳನ್ನು ಈಡೇರಿಸುವವರು ಇಲ್ಲದಂತಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆಯ ಬಗ್ಗೆ ಸದಾ ಆತಂಕ ಇದ್ದೇ ಇರುತ್ತದೆ. ಕೆಲವು ಕಡೆ ಸಮಾಜ ಕಂಟಕರಿಂದ ಕಿರುಕುಳ, ಮತ್ತೆ ಕೆಲವು ಕಡೆ ಸ್ವತಃ ಕುಟುಂಬದವರಿಂದಲೇ ನಿರ್ಲಕ್ಷ್ಯ. ಇಂತಹ ಆತಂಕವನ್ನು ದೂರ ಮಾಡಲು ಮತ್ತು ಅವರಿಗೆ ಧೈರ್ಯ ತುಂಬಲು ಕರ್ನಾಟಕ ಪೊಲೀಸ್ ಇಲಾಖೆ `ಆಸರೆ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ಹಿರಿಯ ನಾಗರಿಕರು ತಿಳಿದುಕೊಂಡು ಅದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿ ಪೊಲೀಸರೇ ಅಂತಹ ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುವುದು, ತುರ್ತು ವೈದ್ಯಕೀಯ ಸೇವೆ, ಸರ್ಕಾರಿ ಸೇವೆ ಇತ್ಯಾದಿಗಳ ಬಗ್ಗೆ ನೆರವಾಗುತ್ತಾರೆ ಎಂದರು.
ಹಿರಿಯರ ಬಗ್ಗೆ ನಿರ್ಲಕ್ಷ್ಯ ತೋರುವ ಕುಟುಂಬದ ಸದಸ್ಯರಿಗೆ ಪೊಲೀಸರು ತಿಳುವಳಿಕೆ ನೀಡುವ ಕಾರ್ಯವನ್ನು ಸಹ ಮಾಡುತ್ತಾರೆ. ಅದಕ್ಕಾಗಿ ಹಿರಿಯರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ಇಲಾಖೆಯ ಆಸರೆ ಸದಾ ಇರುತ್ತದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ವಹಿಸಿದ್ದರು. ಸಿ.ಪಿ.ಐ ಬಿ.ವೈ. ನ್ಯಾಮಗೌಡ್ರ, ಚನ್ನಪ್ಪ ಕೋಲಕಾರ, ಚಂಬಣ್ಣ ಬಾಳಿಕಾಯಿ, ಐ.ಎಸ್. ಮಡಿವಾಳರ, ಎಸ್.ಸಿ. ಅಳಗವಾಡಿ, ಡಾ. ಪಿ.ಡಿ. ತೋಟದ, ದೇವಣ್ಣ ಬಳಿಗಾರ, ಕುಬೇರಪ್ಪ ಮಹಾಂತಶೆಟ್ಟರ, ಅಶೋಕ ಪಡ್ನೀಸ್, ಎಸ್.ಎಸ್. ಪವಾಡಶೆಟ್ಟರ, ಸೂಗಿರಪ್ಪ ವಾಲಿಶೆಟ್ಟರ, ಶಿವಣ್ಣ ಕುಮಸಿ, ತೋಟಪ್ಪ ಸೂರಣಗಿ, ನಿಂಗಪ್ಪ ಬನ್ನಿ, ನೀಲಪ್ಪ ಕರ್ಜೆಕಣ್ಣವರ ಮುಂತಾದವರು ಹಾಜರಿದ್ದರು.



