ಗದಗ: ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸಾಮಾಜಿಕ–ಆಧ್ಯಾತ್ಮಿಕ ಬದ್ಧತೆಯೊಂದು ಗಮನಸೆಳೆಯುವ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮಾದ ರೂ.2000 ನೆರವು ಮೊತ್ತವನ್ನು ಗ್ರಾಮದಲ್ಲಿನ ಶ್ರೀ ರೇಣುಕಾದೇವಿ ಎಲ್ಲಮ್ಮನ ದೇವಸ್ಥಾನ ಕಟ್ಟಡ ಕಾಮಗಾರಿಗೆ ದೇಣಿಗೆಯಾಗಿ ನೀಡುವ ನಿರ್ಧಾರವನ್ನು ಗ್ರಾಮ ಮಹಿಳೆಯರು ಕೈಗೊಂಡಿದ್ದಾರೆ.
ಗ್ರಾಮದ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಗೆ ಜಮಾ ಆದ ಮೊತ್ತವನ್ನು ಸ್ವಯಂಪ್ರೇರಿತವಾಗಿ ದೇವಸ್ಥಾನದ ಅಭಿವೃದ್ಧಿಗೆ ಸಮರ್ಪಿಸಿದ್ದು, ಗ್ರಾಮದಲ್ಲಿ ಭಕ್ತಿಭಾವ ಮತ್ತು ಏಕತೆ ಮೆರೆಯಲಾಗಿದೆ. ಮಹಿಳೆಯರ ಈ ತೀರ್ಮಾನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಂತಾಗಿದೆ.
ಗ್ರಾಮದ ಹಿರಿಯರು ಹಾಗೂ ಯುವಕರು ಮಹಿಳೆಯರ ಈ ದಾನಶೀಲತೆಯನ್ನು ಶ್ಲಾಘಿಸಿದ್ದು, ಗ್ರಾಮಾಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮತ್ತಷ್ಟು ಬಲವಾಗುತ್ತಿರುವುದನ್ನು ಇದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ದೇವಸ್ಥಾನ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಗ್ರಾಮ ಸಮಿತಿ ತಿಳಿಸಿದೆ.



