ಬೆಂಗಳೂರು: ಗಂಡನ ಕ್ಯಾನ್ಸರ್ ಚಿಕಿತ್ಸೆಗಾಗಿ ಕೆಲಸ ಮಾಡುತ್ತಿದ್ದ ಮನೆಯಿಂದ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದ ಮಹಿಳೆಯನ್ನು ಜೀವನಭೀಮಾನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಚೈತ್ರಾ ಎಂದು ಗುರುತಿಸಲಾಗಿದೆ.
ಚೈತ್ರಾ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಸರ್ಜನ್ ಆಗಿರುವ ವೈದ್ಯರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದಳು. ಮನೆಯ ಮಹಡಿಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಬೆಳ್ಳಿ ಪಾತ್ರೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಹಂತ ಹಂತವಾಗಿ ಕಳವು ಮಾಡುತ್ತಿದ್ದಳು ಎಂಬ ಆರೋಪ ಇದೆ.
ಹಬ್ಬದ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸುತ್ತಿದ್ದ ಬೆಳ್ಳಿ ಪಾತ್ರೆಗಳನ್ನು ಪ್ರತೀ ಬಾರಿ ಒಂದೊಂದೇ ಎಗರಿಸುತ್ತಿದ್ದಳು. ಕಳವು ಮಾಡಿದ ಪಾತ್ರೆಗಳನ್ನು ಅಡವಿಟ್ಟು ಹಣ ಪಡೆದು ಬಳಸುತ್ತಿದ್ದಳು. ಬಳಿಕ ಅನುಮಾನ ಬಾರದಂತೆ ಅದೇ ಮನೆಯಲ್ಲಿ ಕೆಲಸ ಮುಂದುವರಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 12.5 ಕೆಜಿ ತೂಕದ ಬೆಳ್ಳಿ ಪಾತ್ರೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಕಳವು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೀಪಾವಳಿ ಹಬ್ಬದ ಕೆಲ ದಿನಗಳ ಮುನ್ನ ಚೈತ್ರಾ ಕೆಲಸ ಬಿಟ್ಟಿದ್ದಳು. ಹಬ್ಬದ ವೇಳೆ ಪಾತ್ರೆಗಳ ಚೀಲ ತೆರೆಯುತ್ತಿದ್ದ ಮನೆಯವರಿಗೆ ಬೆಳ್ಳಿ ಸಾಮಗ್ರಿಗಳು ಕಾಣೆಯಾಗಿರುವುದು ತಿಳಿದು ಶಾಕ್ ಆಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡರು.
ಹಿಂದಿನ ಕೆಲಸದವರ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದ ಹಿನ್ನೆಲೆ ಚೈತ್ರಾಳನ್ನು ವಿಚಾರಣೆ ನಡೆಸಿದಾಗ ಕಳ್ಳತನ ಒಪ್ಪಿಕೊಂಡಿದ್ದಾಳೆ. ಬಂಧಿತಳಿಂದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 12.5 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.



