ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವು ಜನಸಾಮಾನ್ಯರ ಪಾಲಿಗೆ ನಿಜವಾದ ಆಶಾಕಿರಣವಾಗಿ ಪರಿಣಮಿಸಿತು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಚಿವರು ಹಾಗೂ ಅಧಿಕಾರಿಗಳ ಮುಂದಿಡುವ ಮೂಲಕ ತ್ವರಿತ ಪರಿಹಾರ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿರಹಟ್ಟಿ ತಾಲೂಕಿನ ವಡವಿ ಹೊಸೂರು ಗ್ರಾಮದ ಪ್ರಭುಗೌಡ ಪಾಟೀಲ್, ತಮ್ಮ ಹೊಲದ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಹವಾಲು ಸಲ್ಲಿಸಿ, ಜನತಾ ದರ್ಶನ ಕಾರ್ಯಕ್ರಮದಿಂದ ಬಡವರಿಗೆ ಮತ್ತು ರೈತರಿಗೆ ಬಹಳ ಅನುಕೂಲವಾಗಿದೆ. ಸರ್ಕಾರದ ದಿಟ್ಟ ಹೆಜ್ಜೆಯಿಂದ ಸಾಮಾನ್ಯರಿಗೆ ನ್ಯಾಯ ಸಿಗುವ ವೇದಿಕೆ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅದೇ ಗ್ರಾಮದ ನರಸಿಂಹಗೌಡ ಪಾಟೀಲರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರೂಪ್-ಡಿ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಅರ್ಜಿ ಸಲ್ಲಿಸಿ, ಜನತಾ ದರ್ಶನದ ಮೂಲಕ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಕೇಳಿ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ನೇರ ಪರಿಹಾರ ದೊರೆಯುತ್ತಿದೆ ಎಂದರು.
ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಬಸವರೆಡ್ಡಿ ಕೆ.ನಾಗನೂರು ಅವರು ತಮ್ಮ ಜಮೀನಿನಲ್ಲಿ ನೀರಿನ ಪೂರೈಕೆಯಿಂದ ಸುತ್ತಮುತ್ತಲಿನ ರೈತರಿಗೆ ಉಂಟಾಗಿರುವ ತೊಂದರೆ ಪರಿಹರಿಸಲು 25 ವೋಲ್ಟ್ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅನ್ನು 63 ವೋಲ್ಟ್ ಸಾಮರ್ಥ್ಯಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದರು. ರೈತರ ಸಮಸ್ಯೆಗಳಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗುತ್ತವೆ. ಕುಂದುಕೊರತೆಗಳನ್ನು ಬಗೆಹರಿಸಿದರೆ ಗ್ರಾಮೀಣ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಹೇಳಿದರು.
ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದ ಮಂಜುನಾಥಯ್ಯ ಹಳ್ಳಿ ಅವರು ಭೂಸ್ವಾಧೀನ ಕುರಿತ ಅಹವಾಲು ಸಲ್ಲಿಸಿ, ಜನತಾ ದರ್ಶನ ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇಂತಹ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿಯೂ ನಡೆಯಬೇಕು ಎಂದು ಸಲಹೆ ನೀಡಿದರು.
ಲಕ್ಷೆö್ಮÃಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದ ಮಲ್ಲಿಕಾರ್ಜುನ ವಿ.ದೊಡ್ಡಮನಿ ಅವರು ರೇಷ್ಮೆ ಇಲಾಖೆಯಿಂದ ರೈತರಿಗೆ ಸಹಾಯಧನ ಒದಗಿಸುವಂತೆ ಮನವಿ ಸಲ್ಲಿಸಿದರೆ, ರೋಣ ಗ್ರಾಮದ ಮೆಹಬೂಬ್ ಬಾಬು ಸಾಬ್ ಅವರು ಪಡಿತರ ಚೀಟಿಯಲ್ಲಿ ನೌಕರರ ಹೆಸರು ಇರುವ ಕಾರಣ ವಿಧಿಸಲಾದ 86 ಸಾವಿರ ರೂ. ದಂಡ ರದ್ದುಪಡಿಸುವಂತೆ ಕೋರಿದರು.
ಎಲ್ಲಾ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಸಚಿವ ಎಚ್.ಕೆ. ಪಾಟೀಲ, ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿ, ತ್ವರಿತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಒಟ್ಟಾರೆ, ಜನತಾ ದರ್ಶನ ಕಾರ್ಯಕ್ರಮವು ಜನಸಾಮಾನ್ಯರ ಸಮಸ್ಯೆಗಳಿಗೆ ನೇರ ಸ್ಪಂದನೆ ದೊರಕಿಸುವ ವೇದಿಕೆಯಾಗಿ ರೂಪುಗೊಂಡಿದ್ದು, ಬಡವರು ಮತ್ತು ರೈತರ ಪಾಲಿಗೆ ಆಶಾಕಿರಣವಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.
ಬಾಕ್ಸ್
ಗಜೇಂದ್ರಗಡ ತಾಲೂಕಿನ ನಾಗರಸಕೊಪ್ಪದ ಗ್ರಾಮದ ಶರಣು ಎಸ್.ಸೊಬರದ ಅವರು ಕೇಂದ್ರೀಯ ವಿದ್ಯಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿ, ಜನತಾ ದರ್ಶನ ಜನರ ಅಹವಾಲುಗಳಿಗೆ ಸ್ಪಂದಿಸುವ ಪರಿಣಾಮಕಾರಿ ವೇದಿಕೆಯಾಗಲಿ ಎಂದು ಆಶಿಸಿದರು. ಅದೇ ಗ್ರಾಮದ ಭಾಗ್ಯಶ್ರೀ ಅಂಗಡಿ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗದಿರುವ ಕುರಿತು ಅಹವಾಲು ನೀಡಿ ತ್ವರಿತ ಪರಿಹಾರ ಕೋರಿದರು.



