ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಅವರಿಗೆ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ `ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ವೃತ್ತಿಯಿಂದ ಶಿಕ್ಷಕರಾಗಿ, ಶಿರಹಟ್ಟಿ ತಾಲೂಕಿನ ಕಡಕೋಳದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಹಿರಿಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ತಮ್ಮನಗೌಡ್ರ ಅವರು 1989ರಿಂದ ಗ್ರಂಥಗಳನ್ನು ಪ್ರಕಟಿಸುತ್ತಿದ್ದು, ಇದುವರೆಗೆ 115 ಪುಸ್ತಕ ಬಿಡುಗಡೆಗೊಳಿಸಿದ್ದಾರೆ.
ವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಡಾ. ಕೃಷ್ಣಪ್ರಸಾದ ಕೂಡ್ಲು, ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಾಮನರಾವ ಬೇಕಲ್, ಪ್ರದೀಪ ಬೇಕಲ್, ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಡಾ. ಕೊಳಚಪ್ಪೆ ಗೋವಿಂದ ಭಟ್, ಪ್ರದೀಪಕುಮಾರ ಕಲ್ಕೂರ, ನಂ. ವಿಜಯಕುಮಾರ, ಡಾ. ಸುರೇಶ ನೆಗಳಗುಳಿ, ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾಂದಗಳವರು, ಶ್ರೀಮದ್ ಎಡೆನೀರು ಮಠಾಧೀಶರು, ಶ್ರೀ ಶಂಕರಾಚಾರ್ಯ ಸಂಸ್ಥಾನಮಠ ಕಾಸರಗೋಡು, ಡಾ. ಕೆ.ಜಿ. ವೆಂಕಟೇಶ, ಡಾ. ಬಾಲಕೃಷ್ಣ ಮದ್ದೋಡಿ, ಡಾ. ಸಂಗಮೇಶ ತಮ್ಮನಗೌಡ್ರ, ಇರಾ ನೇಮು ಪೂಜಾರಿ, ವಿಶಾಲಾಕ್ಷ ಪುತ್ರಕಳಾ, ಜಯಾನಂದ ಪೆರಾಜೆ, ಡಾ. ಶಾಂತಾ ಮತ್ತೂರ, ಸತ್ಯವತಿ ಭಟ್, ಕೊಳಚಪ್ಪು, ರತ್ನಾ ಗಿರೋಸಾ ಬದಿ, ಅಲ್ಲಾಸಾಬ ನದಾಫ, ಮಂಜುನಾಥ ಡೋಣಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಶಸ್ತಿ ವಿಜೇತ ಸಾಹಿತಿಗಳಿಗೆ ರಾಮಗಿರಿಯ ವರಕವಿ ಡಾ. ದ.ರಾ. ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಶಂಕ್ರಪ್ಪ ಶಿಳ್ಳಿನ, ಕಡಕೋಳದ ಕೆ.ಪಿ.ಎಸ್. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕನಕಮ್ಮ, ಕೆ.ಪಿ.ಎಸ್. ಪ್ರೌಢಶಾಲಾ ಉಪಪ್ರಾಚಾರ್ಯರಾದ ಎನ್.ವ್ಹಿ. ಮುಲ್ಕಿಗೌಡ್ರ ಮತ್ತು ಕೆ.ಪಿ.ಎಸ್. ಪ್ರಾಥಮಿಕ ಶಾಲಾ ವಿಭಾಗದ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಗೋವನಾಳದ ಪೂಜ್ಯ ಶ್ರೀ ರಮೇಶ ಮಹಾಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ, ಸಾಹಿತಿಗಳಾದ ಡಾ. ಸಂಗಮೇಶ ತಮ್ಮನಗೌಡ್ರ ಅವರು ನಮ್ಮ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ. 115 ಕೃತಿಗಳನ್ನು ಬರೆದು ಪ್ರಕಟಿಸುವುದು ಸಾಮಾನ್ಯ ಮಾತಲ್ಲ. ಅಂತಹ ಸಾಹಸದ ಕೆಲಸಕ್ಕೆ ಅವರು ಕೈ ಹಾಕಿರುವುದು ಕನ್ನಡ ನಾಡು-ನುಡಿಯ ಅಭಿಮಾನದ ತುಡಿತವನ್ನು ಎತ್ತಿ ತೋರಿಸುತ್ತದೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಮೌಲ್ಯಯುತ ಕೃತಿಗಳನ್ನು ಪ್ರಕಟಿಸಲಿ ಎಂದು ಶುಭ ನುಡಿದರು.



