ಶಿವಮೊಗ್ಗ: ಮನೆಯ ಮುಂದೆ ಆಟವಾಡುತ್ತಿದ್ದ ಏಳು ವರ್ಷದ ಬಾಲಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಂಡುಗದ್ದೆ ಗ್ರಾಮದಲ್ಲಿ ನಡೆದಿದೆ.
ಗುಂಡುಗದ್ದೆ ಗ್ರಾಮದ ನಿವಾಸಿ ಪ್ರಗತ್ ಕೆ.ಆರ್. ಮತ್ತು ರಂಜನಾ ದಂಪತಿಯ ಪುತ್ರ ಋಷ್ಯ.ಪಿ (7) ಮೃತಪಟ್ಟ ಬಾಲಕ. ಮಧ್ಯಾಹ್ನದ ವೇಳೆ ಮನೆಯ ಬಳಿ ಆಟವಾಡುತ್ತಿದ್ದ ಬಾಲಕ ಏಕಾಏಕಿ ರಸ್ತೆಗೆ ಬಂದಿದ್ದಾನೆ. ಇದೇ ವೇಳೆ ಬಂದ ಕಾರೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮನೆಯ ಸಮೀಪ ರಸ್ತೆಯಲ್ಲಿ ಲಾರಿಯೊಂದು ನಿಂತಿದ್ದರಿಂದ ಬಾಲಕ ಚಾಲಕನಿಗೆ ಕಾಣಿಸದೇ ಏಕಾಏಕಿ ರಸ್ತೆ ಪ್ರವೇಶಿಸಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



