ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಜುಲೈ ತಿಂಗಳ ಮೂರನೇ ವಾರದ ಆರಂಭದಲ್ಲೇ ಬೆಲೆಗಳು ಏರುಮುಖವಾಗಿದ್ದು, ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ ಎಂದು ಗುಡ್ರಿಟರ್ನ್ಸ್ ವರದಿ ಮಾಡಿದೆ.
ಜುಲೈ 20, 2026ರ ಸೋಮವಾರದ ದರದ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 17 ರೂಪಾಯಿ ಏರಿಕೆಯಾಗಿದೆ. ಇದರಿಂದ ಒಂದು ಗ್ರಾಂ ಚಿನ್ನದ ಬೆಲೆ 14,346 ರೂಪಾಯಿಗೆ ತಲುಪಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 170 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ ಬೆಲೆ 1,43,460 ರೂಪಾಯಿ ದಾಖಲಾಗಿದೆ.
ಇದೇ ವೇಳೆ 22 ಕ್ಯಾರೆಟ್ ಚಿನ್ನದ ದರದಲ್ಲೂ ಏರಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ 15 ರೂಪಾಯಿ ಹೆಚ್ಚಳವಾಗಿದ್ದು, ಒಂದು ಗ್ರಾಂ ಚಿನ್ನದ ಬೆಲೆ 13,150 ರೂಪಾಯಿಗೆ ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 150 ರೂಪಾಯಿ ಏರಿಕೆಯಾಗಿ, 1,31,500 ರೂಪಾಯಿ ದಾಖಲಾಗಿದೆ.
ಬೆಳ್ಳಿ ದರದಲ್ಲಿಯೂ ಭಾರೀ ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ 5 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 235 ರೂಪಾಯಿ ಇದ್ದು, ಒಂದು ಕೆಜಿ ಬೆಳ್ಳಿಯ ದರ 2,35,000 ರೂಪಾಯಿಗೆ ತಲುಪಿದೆ.
ಜುಲೈ 1ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,078 ರೂಪಾಯಿ ಇತ್ತು. ಇದೀಗ ಜುಲೈ 20ರಂದು ಅದು 14,346 ರೂಪಾಯಿಗೆ ಏರಿಕೆಯಾಗಿದೆ. ಈ ತಿಂಗಳಲ್ಲಿ ಚಿನ್ನದ ಗರಿಷ್ಠ ದರ 14,700 ರೂಪಾಯಿವರೆಗೆ ತಲುಪಿತ್ತು.
ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಹಾಗೂ ಜಾಗತಿಕ ತೈಲ ಬೆಲೆ ಏರಿಕೆಯ ಪರಿಣಾಮ ಕಳೆದ ವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಇದರ ನಡುವೆ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ರದ್ದಾಗಿರುವುದು ಹಾಗೂ ಇರಾನ್ ವಿರುದ್ಧದ ಸಂಘರ್ಷದ ಆತಂಕವೂ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ.
ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೇಡಿಕೆ ಹಾಗೂ ದರದಲ್ಲಿ ಮತ್ತಷ್ಟು ಏರಿಳಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



