ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸ್ವಚ್ಛತೆ, ಕಸ ವಿಂಗಡಣೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂವರು ರಾಯಭಾರಿಗಳನ್ನು ನೇಮಕ ಮಾಡಿದೆ.
ಸ್ವಚ್ಛ ಸರ್ವೇಕ್ಷಣ ಅಭಿಯಾನದ ಅಂಗವಾಗಿ ನಾಗರಿಕರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ, ಚಲನಚಿತ್ರ ನಟ ಅನಿರುದ್ಧ ಜಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ಅವರನ್ನು ರಾಯಭಾರಿಗಳಾಗಿ ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಮಾರ್ಚ್ 9ರಂದು ಟೌನ್‌ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಪ್ರತಿದಿನ ಸರಾಸರಿ 6,000 ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ ಸುಮಾರು 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು 1,000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳ ಪರಿಣಾಮವಾಗಿ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆಯ ಪ್ರಮಾಣ ಹೆಚ್ಚಾಗಿದ್ದು, ಲ್ಯಾಂಡ್‌ಫಿಲ್‌ಗೆ ಸಾಗುವ ಕಸದ ಪ್ರಮಾಣದಲ್ಲಿ ಕ್ರಮೇಣ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದರು.
ಇನ್ನೂ ಜಿಬಿಎ ವ್ಯಾಪ್ತಿಯಲ್ಲಿ ರಸ್ತೆಬದಿ ಕಸ ಬಿಸಾಡುವವರು ಹಾಗೂ ಕಸ ವಿಂಗಡಿಸದೆ ನೀಡುವವರಿಂದ ಪ್ರತಿ ತಿಂಗಳು ಸರಾಸರಿ ರೂ.60 ಲಕ್ಷ ದಂಡ ಸಂಗ್ರಹಿಸಲಾಗುತ್ತಿದೆ. ಈ ಹಣದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಟ್ರ್ಯಾಕ್ಟರ್ ಖರೀದಿಸಲಾಗಿದ್ದು, ಅವುಗಳ ಮೂಲಕ ಬಲ್ಕ್ ವೇಸ್ಟ್ ತೆರವುಗೊಳಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ 6,000 ಮೆಟ್ರಿಕ್ ಟನ್‌ಗಿಂತ ಹೆಚ್ಚು ಬಲ್ಕ್ ವೇಸ್ಟ್ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಳ ಹೋಬಳಿಯ ಗುಂಡಲಹಳ್ಳಿ ಗ್ರಾಮ ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಸರ್ಕಾರಿ ಜಾಗ ಸೇರಿ ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಗಾಗಿ ಎರಡೂ ಕಡೆ 100 ಎಕರೆಗೂ ಅಧಿಕ ಜಾಗ ಗುರುತಿಸಲಾಗಿದೆ. ಭೂ ಪರಿಹಾರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಕಂಡುಬಂದಲ್ಲಿ ಸಹಾಯ 2.0 ತಂತ್ರಾಂಶ, ಜಿಬಿಎ ಸಹಾಯವಾಣಿ 1533 ಅಥವಾ ವಾಟ್ಸಪ್ ಚಾಟ್‌ಬಾಟ್ ಸಂಖ್ಯೆ 9448197197 ಮೂಲಕ ದೂರು ಸಲ್ಲಿಸಬಹುದಾಗಿದೆ. ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ತ್ವರಿತವಾಗಿ ಪರಿಹರಿಸಲಾಗುತ್ತದೆ ಎಂದು ತಿಳಿಸಿದರು.



