ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನಲ್ಲಿನ ವಿಂಡ್ ಕಂಪನಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳ ದಾಖಲಾತಿಗಳನ್ನು ಆಗಾಗ ಪರಿಶೀಲಿಸಿ ಎಚ್ಚರಿಕೆಯಿಂದ ಇರಬೇಕು ಎಂದು ರೈತ ಸಂಘದ ಮಹಿಳಾ ಮುಖಂಡೆ ಕಾವ್ಯಾ ಸೋಮನಕಟ್ಟಿ ಎಚ್ಚರಿಕೆ ನೀಡಿದರು.
ಪಟ್ಟಣದ ಪಿಡಬ್ಲ್ಯುಡಿಯ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಲವು ಗ್ರಾಮಗಳಲ್ಲಿ ವಿಂಡ್ ಕಂಪನಿಗಳು ಏಜೆಂಟರ ಮೂಲಕ ರೈತರ ಜಮೀನುಗಳನ್ನು ಲೀಜ್‌ಗೆ ಪಡೆದು ಕೆಲಸಗಳನ್ನು ನಡೆಸುತ್ತಿವೆ. ಆದರೆ ಕೆಲವೆಡೆ ರೈತರ ಅರಿವಿಗೆ ಬಾರದಂತೆ ಹಕ್ಕು ನೋಂದಣಿ ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ ಎಂದು ಹೇಳಿದರು.
ಹೀಗಾಗಿ ರೈತರು ತಮ್ಮ ಜಮೀನುಗಳ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಈ ವಿಷಯದ ಕುರಿತು ಶೀಘ್ರದಲ್ಲೇ ರೈತ ಸಂಘದ ವತಿಯಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ರೈತ ಮುಖಂಡ ಶಿವಲಿಂಗಪ್ಪ ಬೊಪಳಾಪೂರ ಮಾತನಾಡಿ, ಕೇಂದ್ರ ಸರ್ಕಾರ ಅಮೆರಿಕದೊಂದಿಗೆ ಮಾಡಿಕೊಂಡಿರುವ ರೈತ ಒಪ್ಪಂದ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಈ ಒಪ್ಪಂದದಿಂದ ರೈತರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ವಿದೇಶಿಗಳು ಸೂಚಿಸುವ ಬೆಳೆಗಳನ್ನು ಬೆಳೆಸಬೇಕಾದ ಪರಿಸ್ಥಿತಿ ರೈತರಿಗೆ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳಿಗೆ ವಿರೋಧವಾಗಿ ದೆಹಲಿಯಲ್ಲಿ ಸಾವಿರಾರು ರೈತರು ಹೋರಾಟ ನಡೆಸಿದ್ದು, 750ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದರು ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಹೇಳಿದರು. ರೈತರ ಹಿತಾಸಕ್ತಿಯನ್ನು ಕಾಪಾಡುವ ಆಡಳಿತ ನೀಡಬೇಕು; ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ರೈತ ಮುಖಂಡ ಮೇಘರಾಜ ಭಾವಿ ಮಾತನಾಡಿ, ಕಳಸಾ–ಬಂಡೂರಿ ಹಾಗೂ ಕೃಷ್ಣಾ ನದಿ ಜೋಡಣೆ ಯೋಜನೆಗಳನ್ನು ಜಾರಿಗೆ ತಂದು ನೀರಾವರಿ ಸೌಲಭ್ಯ ಒದಗಿಸಬೇಕು. ಮಳೆಯನ್ನು ಅವಲಂಬಿಸಿರುವ ಗದಗ ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಜೊತೆಗೆ ಕೃಷಿ ಪರಿಷತ್ ಸ್ಥಾಪನೆಗೂ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾದೇಗೌಡ ಭಾವಿ, ಸಂಗಣ್ಣ ದಂಡಿನ, ಬಸವರಾಜ ಹೊಸಮನಿ, ಬಸನಗೌಡ ಪಾಟೀಲ, ಯಲ್ಲಪ್ಪ ಹಡಗಲಿ, ವಿರೇಶ ಕಲಹಾಳ, ಇಮಾಮಸಾಬ ಚೋಪದಾರ, ಶೇಖಸಾಬ ನದಾಪ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
“ರೈತರು ತಮ್ಮ ಜಮೀನುಗಳ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಇಂದು ಮಾಡುವ ತಪ್ಪಿನಿಂದ ಭವಿಷ್ಯದಲ್ಲಿ ಮಕ್ಕಳಿಗೆ ತೊಂದರೆ ಉಂಟಾಗಬಾರದು. ವಿಂಡ್ ಕಂಪನಿಗಳ ವ್ಯವಹಾರಗಳಲ್ಲಿ ರೈತರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.”
— ಕಾವ್ಯಾ ಸೋಮನಕಟ್ಟಿ, ರೈತ ಸಂಘದ ಮಹಿಳಾ ಮುಖಂಡೆ
“ಸರ್ಕಾರಗಳು ರೈತರಿಗೆ ಹಾನಿ ಮಾಡುವ ಯೋಜನೆಗಳ ಬದಲು ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಆರ್ಥಿಕವಾಗಿ ಬಲಪಡಿಸಬೇಕು. ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು,”
-ಮೇಘರಾಜ ಭಾವಿ, ರೈತ ಸಂಘದ ಮುಖಂಡ
ರೈತರ ಪ್ರಮುಖ ಆಗ್ರಹಗಳು
ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಕಳಸಾ–ಬಂಡೂರಿ ಯೋಜನೆ ಜಾರಿಗೆ ತರಬೇಕು. ಕೃಷ್ಣಾ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸಬೇಕು. ಗದಗ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕೆ ಕೃಷಿ ಪರಿಷತ್ ಸ್ಥಾಪಿಸಬೇಕು.



