ಕಾಮರೆಡ್ಡಿ: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಮೂವರು ಬಾಲಕಿಯರು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮೃತರಾದ ಬಾಲಕಿಯರು 8, 7 ಮತ್ತು 5 ವರ್ಷದ ಸಹೋದರಿಯರು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳು ಬೆಳಿಗ್ಗೆ ತಮ್ಮ ತಂದೆಯೊಂದಿಗೆ ಮನೆ ಹೊರಗೆ ಹೋಗಿದ್ದು, ಬಳಿಕ ಮನೆಗೆ ಮರಳಲಿಲ್ಲ.
ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದರು. ನಂತರ ಶೋಧ ಕಾರ್ಯಾಚರಣೆ ವೇಳೆ ನೀರಿನ ಟ್ಯಾಂಕ್‌ನಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆಯಾಯಿತು. ಬಳಿಕ ಮುಂದುವರೆದ ಹುಡುಕಾಟದಲ್ಲಿ ಮೂರನೇ ಬಾಲಕಿಯ ಶವವೂ ಪತ್ತೆಯಾಗಿದೆ.
ಮಕ್ಕಳ ತಂದೆಯ ಮೇಲೆಯೇ ಅನುಮಾನ ವ್ಯಕ್ತವಾಗಿದ್ದು, ಮಕ್ಕಳನ್ನು ನೀರಿಗೆ ತಳ್ಳಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತಿಳಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಘಟನೆ ಬಳಿಕ ಕಾಮರೆಡ್ಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.



