ಚಿಕ್ಕಮಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಕೊರತೆಯ ಪರಿಣಾಮ ಶಾಲೆಗಳ ಬಿಸಿಯೂಟ ಯೋಜನೆ ಮೇಲೂ ಬೀರಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸಿಗದೆ ಸಿಬ್ಬಂದಿ ಅಡುಗೆ ಮಾಡಲು ಪರದಾಡಿದ್ದಾರೆ.
ಸಿಲಿಂಡರ್ ಸರಬರಾಜಾಗದ ಹಿನ್ನೆಲೆ ಶಾಲೆಯ ಸಿಬ್ಬಂದಿ ಸೌದೆ ಬಳಸಿ ಬಯಲಲ್ಲೇ ಬಿಸಿಯೂಟ ಸಿದ್ಧಪಡಿಸಿದ್ದಾರೆ. ಕಳೆದ ಐದು ದಿನಗಳಿಂದ ಗ್ಯಾಸ್ ಇಲ್ಲದೆ ಸೌದೆ ಬಳಸಿ ಅಡುಗೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಶಾಲೆಯಲ್ಲಿ ಸುಮಾರು 60 ರಿಂದ 70 ವಿದ್ಯಾರ್ಥಿಗಳು ಇದ್ದು, ಗ್ಯಾಸ್ ಇಲ್ಲದೆ ಸೌದೆಯಲ್ಲಿ ಅಷ್ಟು ಮಕ್ಕಳಿಗೆ ಅಡುಗೆ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆಯಿದ್ದರೂ ಗ್ಯಾಸ್ ಏಜೆನ್ಸಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ನಡುವೆ ಪರೀಕ್ಷೆ ಸಮಯವಾಗಿರುವುದರಿಂದ ಶಿಕ್ಷಕರು ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದು, ಅಡುಗೆ ಸಮಸ್ಯೆಯನ್ನು ಸಹ ಎದುರಿಸುವುದು ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ. ತಕ್ಷಣ ಶಾಲೆಗೆ ಗ್ಯಾಸ್ ಸೌಲಭ್ಯ ಕಲ್ಪಿಸಬೇಕೆಂದು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.



