ಶಿವಮೊಗ್ಗ: ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ತಡಸನಹಳ್ಳಿ ಗ್ರಾಮದ ಬಳಿ ರೈತನ ಮೇಲೆ ದಾಳಿ ಮಾಡಿದ್ದ ಚಿರತೆ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಮೃತ ರೈತ ಮೃತ್ಯುಂಜಯ ಅವರ ತೋಟದ ಸಮೀಪವೇ ಚಿರತೆಯ ಕಳೇಬರ ಪತ್ತೆಯಾಗಿದ್ದು, ಸ್ಥಳೀಯ ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಪಶುವೈದ್ಯರ ಮೂಲಕ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮೇಲ್ನೋಟಕ್ಕೆ ಚಿರತೆ ಹಸಿವಿನಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಅದರ ದೇಹದ ಮೇಲೆ ಯಾವುದೇ ಗಾಯಗಳ ಗುರುತುಗಳು ಕಂಡುಬಂದಿಲ್ಲ. ಕಲ್ಲುಗಳಿಂದ ದಾಳಿ ನಡೆದಿರುವ ಲಕ್ಷಣಗಳೂ ಕಾಣಿಸಿಲ್ಲ.
ಈ ಕುರಿತು ಮಾಹಿತಿ ನೀಡಿದ ಶಿರಾಳಕೊಪ್ಪ ಆರ್‌ಎಫ್‌ಒ ಜಾವೇದ್ ಬಾಷಾ ಅಂಗಡಿ, “ಇದೇ ಮೊನ್ನೆ ರೈತನ ಮೇಲೆ ದಾಳಿ ಮಾಡಿದ ಚಿರತೆ. ದಾಳಿ ನಡೆದ ಸ್ಥಳದ ಬಳಿ ನಾವು ಬೋನ್ ಇಟ್ಟಿದ್ದೆವು. ಬೋನ್‌ನಿಂದ ಸ್ವಲ್ಪ ದೂರದಲ್ಲೇ ಚಿರತೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಚಿರತೆಯ ಹೊಟ್ಟೆಯಲ್ಲಿ ಯಾವುದೇ ಆಹಾರ ಅವಶೇಷಗಳು ಪತ್ತೆಯಾಗಿಲ್ಲ. ಇದರಿಂದ ಹಸಿವು ಅಥವಾ ಅನಾರೋಗ್ಯದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.



