ನವದೆಹಲಿ: ದೆಹಲಿ ವಿಧಾನಸಭೆ ಸಂಕೀರ್ಣ ಹಾಗೂ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ ಸುಮಾರು 7:28ರ ಸುಮಾರಿಗೆ ವಿಧಾನಸಭೆ ಸಂಕೀರ್ಣಕ್ಕೆ ಮೊದಲ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಇದರ ಜೊತೆಗೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಅಧಿಕೃತ ಇಮೇಲ್ ಖಾತೆಗೂ ಇದೇ ರೀತಿಯ ಸಂದೇಶ ಬಂದಿದೆ. ಸಂದೇಶದಲ್ಲಿ ವಿಧಾನಸಭಾ ಮೆಟ್ರೋ ನಿಲ್ದಾಣದ ಹೆಸರನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ವಿಧಾನಸಭೆ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳಮತ್ತು ಪೊಲೀಸ್ ತಂಡಗಳನ್ನು ತಕ್ಷಣವೇ ನಿಯೋಜಿಸಲಾಗಿದೆ.
ಘಟನೆಯ ಹಿನ್ನೆಲೆ ದೆಹಲಿ ನಗರಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸಾರ್ವಜನಿಕ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಇಮೇಲ್ ಬೆದರಿಕೆಯ ಮೂಲವನ್ನು ಪತ್ತೆಹಚ್ಚಲು ಭದ್ರತಾ ಸಂಸ್ಥೆಗಳು ತನಿಖೆ ಆರಂಭಿಸಿವೆ. ಬೆದರಿಕೆ ನಿಜವಾಗಿದೆಯೇ ಅಥವಾ ವದಂತಿಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.



