ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಅಸಮಾಧಾನ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸ್ಥಾನ ಕೈತಪ್ಪಿದ ಹಿರಿಯ ನಾಯಕರ ಅಸಮಾಧಾನದ ನಡುವೆಯೇ ಇದೀಗ ಪಕ್ಷದ ಕಾರ್ಯಕರ್ತರೂ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದಾರೆ.
ಪಕ್ಷದ ಹೈಕಮಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲ ನಾಯಕರು ವೈಯಕ್ತಿಕ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಹಾಗೂ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರು ಮತ್ತು ನಾಯಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ‘ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು’ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಪಕ್ಷದೊಳಗಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಅಸ್ತಿತ್ವದ ಪ್ರಶ್ನೆ ಎದುರಿಸಬೇಕಾಗಬಹುದು ಎಂದು ಕಾರ್ಯಕರ್ತರು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿಚಾರವಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕೆಲ ನಾಯಕರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಹೆಸರನ್ನು ಬಳಸಿಕೊಂಡು ತಮ್ಮ ರಾಜಕೀಯ ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ರೀತಿಯ ಬೆಳವಣಿಗೆಗಳಿಗೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ಹಿರಿಯ ನಾಯಕರನ್ನು ನಿರ್ಲಕ್ಷಿಸಲಾಗಿದೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕೆ ದ್ರೋಹ ಬಗೆದವರು ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕೆಲವರಿಗೆ ಸಚಿವ ಸ್ಥಾನ ನೀಡಿರುವುದು ದುರದೃಷ್ಟಕರ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಹಾಗೂ ಸಚಿವ ಸ್ಥಾನವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಶಾಸಕರನ್ನು ಸಂಪುಟದಿಂದ ಕೈಬಿಡಬೇಕು ಎಂದು ನಿಷ್ಠಾವಂತ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಜಾತಿ ಮತ್ತು ಹಣಬಲದ ಆಧಾರದ ಮೇಲೆ ಹೈಕಮಾಂಡ್ ಹೆಸರನ್ನು ಬಳಸಿಕೊಂಡು ಅಧಿಕಾರ ಪಡೆಯುವವರನ್ನು ಬದಿಗೊತ್ತಬೇಕು. ಸಾಮಾನ್ಯ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವ ಹಾಗೂ ಪಕ್ಷಕ್ಕಾಗಿ ನಿಷ್ಠೆಯಿಂದ ಹೋರಾಡುವ ಶಾಸಕರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್ನಲ್ಲಿ ಹೆಚ್ಚುತ್ತಿರುವ ಅಸಮಾಧಾನದ ನಡುವೆಯೇ ಇದೀಗ ರಾಹುಲ್ ಗಾಂಧಿಗೆ ಬರೆಯಲಾಗಿರುವ ಈ ಬಹಿರಂಗ ಪತ್ರ ರಾಜ್ಯ ಕಾಂಗ್ರೆಸ್ನೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಮುನ್ನೆಲೆಗೆ ತಂದಿದೆ.



