ಗದಗ: ಮಳೆ ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಗದಗ ಜಿಲ್ಲೆಯ ಮೂರು ತಾಲೂಕುಗಳಿಗೆ ಬರದ ಬರೆ ಎಳೆದಿದೆ.
ಗದಗ, ಮುಂಡರಗಿ ಹಾಗೂ ರೋಣ ತಾಲೂಕುಗಳನ್ನು ಮಧ್ಯಮ ಬರಪೀಡಿತ ತಾಲೂಕುಗಳಾಗಿ ಗುರುತಿಸಿ, ಗ್ರೌಂಡ್ ಟ್ರೂಥಿಂಗ್‌ಗೆ ಒಳಪಡಿಸಲು ಸರ್ಕಾರ ಆದೇಶಿಸಿದೆ.
ಸೆ.22ರಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಮೂರು ತಾಲೂಕುಗಳನ್ನು ಬರ ಮೌಲ್ಯಮಾಪನದ ಪಟ್ಟಿಗೆ ಸೇರಿಸಲಾಗಿದೆ. ಸೆ.24 ಮತ್ತು 25ರಂದು ಕ್ಷೇತ್ರಮಟ್ಟದಲ್ಲಿ ಬೆಳೆಹಾನಿ ಹಾಗೂ ಬರ ಪರಿಸ್ಥಿತಿಯ ವಾಸ್ತವ ಪರಿಶೀಲನೆ ನಡೆಯಲಿದೆ.
ಇದರ ಬೆನ್ನಲ್ಲೇ ಶಾಸಕ ಎಚ್.ಕೆ. ಪಾಟೀಲರ ರಾಜೀನಾಮೆ ಎಚ್ಚರಿಕೆ ಕೂಡ ಮತ್ತೆ ಚರ್ಚೆಗೆ ಬಂದಿದೆ. ಸೆ.20ರಂದು ಮುಳಗುಂದದಲ್ಲಿ ನಡೆದ ರೈತರ ಹೋರಾಟದಲ್ಲಿ ಮಾತನಾಡಿದ್ದ ಅವರು, ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದರು.
ಈ ಹೇಳಿಕೆಯ ಬೆನ್ನಲ್ಲೇ ಗದಗ, ಮುಂಡರಗಿ ಹಾಗೂ ರೋಣ ತಾಲೂಕುಗಳು ಬರದ ಪಟ್ಟಿಗೆ ಸೇರ್ಪಡೆಯಾಗಿರುವುದು ಜಿಲ್ಲೆಯ ರೈತರಲ್ಲಿ ನಿಟ್ಟುಸಿರು ಮೂಡಿಸಿದೆ.
ಆದರೆ, ಸದ್ಯ ಮೂರು ತಾಲೂಕುಗಳನ್ನು ‘ಮಧ್ಯಮ ಬರ’ ಎಂದು ವರ್ಗೀಕರಿಸಲಾಗಿದೆ. ಮುಂದಿನ ಗ್ರೌಂಡ್ ಟ್ರೂಥಿಂಗ್ ಹಾಗೂ ಕ್ಷೇತ್ರ ಪರಿಶೀಲನೆಯ ಬಳಿಕ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ.



