ನವದೆಹಲಿ: ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದ ಹಿನ್ನೆಲೆ ದೆಹಲಿಗೆ ಹಿಂತಿರುಗಿದೆ.
ದೆಹಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟಿದ್ದ AI111 ವಿಮಾನವು ಸುಮಾರು 7 ಗಂಟೆಗಳ ಕಾಲ ಹಾರಾಟ ನಡೆಸಿದ ಬಳಿಕ ಸುರಕ್ಷತಾ ಕಾರಣಗಳಿಂದ ವಾಪಸ್ ದೆಹಲಿಗೆ ಮರಳಿತು. ಸೌದಿ ಅರೇಬಿಯಾ ಆಕಾಶದ ಮೇಲೆ ಹಾರುತ್ತಿರುವ ವೇಳೆ ವಿಮಾನದಲ್ಲಿ ಅಸಾಮಾನ್ಯ ಶಬ್ದ ಕೇಳಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ಮುನ್ನೆಚ್ಚರಿಕಾ ಕ್ರಮವಾಗಿ ಹಿಂದಿರುಗುವ ನಿರ್ಧಾರ ಕೈಗೊಂಡರು.
ಮಧ್ಯಾಹ್ನ ಸುಮಾರು 12:30ಕ್ಕೆ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಏರ್ಬಸ್ A350-900 ಮಾದರಿಯ ಈ ವಿಮಾನದಲ್ಲಿ ಒಂದೇ ತಿಂಗಳಲ್ಲಿ ಎರಡನೇ ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ ವಕ್ತಾರರು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನವನ್ನು ಹಿಂತಿರುಗಿಸಲಾಗಿದೆ. ಪ್ರಸ್ತುತ ವಿಮಾನವನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಸಂಸ್ಥೆ, ಅವರನ್ನು ಲಂಡನ್ಗೆ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.



