ವಿಜಯಪುರ; ಜಿಲ್ಲೆಯಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 42 ಆರೋಪಿಗಳನ್ನು ಬಂಧಿಸಿ 1.20 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ 2024ರಿಂದ 2026ರವರೆಗೆ ದಾಖಲಾಗಿದ್ದ 20ಕ್ಕೂ ಹೆಚ್ಚು ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸರಣಿ ಕಳ್ಳತನ, ದೇವಸ್ಥಾನ ದರೋಡೆ, ಲಾರಿ ತಡೆದು ನಡೆಸಿದ ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವ ಮೂಲಕ ದೊಡ್ಡ ಜಾಲವನ್ನು ಬಯಲಿಗೆಳೆದಿದ್ದಾರೆ.
ಪೊಲೀಸರ ಕಾರ್ಯಾಚರಣೆಯಲ್ಲಿ ಕಳ್ಳತನವಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು, ಜೆಸಿಬಿ, ಪಿಕಪ್ ವ್ಯಾನ್, ಸ್ಕಾರ್ಪಿಯೋ, ಟ್ರ್ಯಾಕ್ಟರ್ಗಳು, ಮೋಟಾರ್ ಸೈಕಲ್ಗಳು ಮತ್ತು ನೀರಿನ ಪಂಪ್ ಸೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಚಡಚಣ ದೇವಸ್ಥಾನ ಕಳ್ಳತನ, ಆಲಮೇಲ ಪ್ರದೇಶದ ಫೈನಾನ್ಸ್ ಕಳ್ಳತನ ಮತ್ತು ಹೊರ್ತಿ ಠಾಣೆ ವ್ಯಾಪ್ತಿಯ ದರೋಡೆ ಪ್ರಕರಣಗಳನ್ನು ಒಳಗೊಂಡಂತೆ ಹಲವು ಪ್ರಕರಣಗಳನ್ನು ಭೇದಿಸಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದು, ಇಂತಹ ಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.



