ನವದೆಹಲಿ: ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
ಬೋಯಿಂಗ್ 737 ವಿಮಾನವು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಎಂಜಿನ್ನಲ್ಲಿ ದೋಷ ಕಂಡುಬಂದ ಕಾರಣ ಬೆಳಿಗ್ಗೆ 10:50ಕ್ಕೆ ತುರ್ತು ಭೂಸ್ಪರ್ಶ ಮಾಡಲಾಗಿದೆ.
ತುರ್ತು ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ರನ್ವೇ 28ರಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಲಾಗಿತ್ತು. ವಿಮಾನದಲ್ಲಿ ಒಟ್ಟು 161 ಪ್ರಯಾಣಿಕರಿದ್ದರು.
ಅಗ್ನಿಶಾಮಕ ಇಲಾಖೆಯ ಪ್ರಕಾರ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದು ಯಾವುದೇ ಅಪಾಯ ಸಂಭವಿಸಿಲ್ಲ. ಈ ವಿಮಾನವು ಟರ್ಕಿಯ ಕೊರೆಂಡನ್ ಏರ್ಲೈನ್ಸ್ ಸಂಸ್ಥೆಗೆ ಸೇರಿದ್ದು, ಅದನ್ನು ಇಂಡಿಗೋ ಕಂಪನಿ ಲೀಸ್ಗೆ ಪಡೆದುಕೊಂಡಿತ್ತು.



