ಬೆಂಗಳೂರು: ಬೆಂಗಳೂರಿನಲ್ಲಿ ಇ-ಖಾತಾ ಅಕ್ರಮ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಇ-ಖಾತಾ ವಿತರಿಸಿದ ಆರೋಪದಡಿ ಸಹಾಯಕ ಆಯುಕ್ತ ಬಸವರಾಜ್ ಎನ್. ಮಾಘಿ ಸೇರಿದಂತೆ ಒಟ್ಟು 31 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜಿಬಿಎ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬ್ಯಾಂಕ್ಗಳಿಗೆ ಮಾತ್ರ ನೀಡಲಾಗಿದ್ದ ವಿಶೇಷ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಅರ್ಹತೆ ಇಲ್ಲದ ಆಸ್ತಿಗಳಿಗೆ ಇ-ಖಾತಾ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬ್ಯಾಂಕ್ಗಳಿಗೆ ನೀಡಿದ್ದ ಸೌಲಭ್ಯ ದುರುಪಯೋಗ?
ಸಾಮಾನ್ಯವಾಗಿ SARFAESI ಕಾಯ್ದೆಯಡಿ ಸಾಲ ಮರುಪಾವತಿಸದ ಆಸ್ತಿಗಳನ್ನು ಬ್ಯಾಂಕ್ಗಳು ಸ್ವಾಧೀನಪಡಿಸಿಕೊಂಡು ಹರಾಜು ಹಾಕುವ ಸಂದರ್ಭದಲ್ಲಿ ಇ-ಖಾತಾ ಪಡೆಯಲು ವಿಶೇಷ ವ್ಯವಸ್ಥೆ ಇದೆ. ಆದರೆ ಈ ವ್ಯವಸ್ಥೆಯನ್ನೇ ಕೆಲವು ಅಧಿಕಾರಿಗಳು ಕಟ್ಟಡ ನಿರ್ಮಾಣಕಾರರು ಹಾಗೂ ಖಾಸಗಿ ಅರ್ಜಿದಾರರೊಂದಿಗೆ ಸೇರಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ.
ನಿಯಮದ ಪ್ರಕಾರ ಸಲ್ಲಿಸಬೇಕಾದ SARFAESI ಆದೇಶ ಅಥವಾ ಮಾರಾಟ ಪ್ರಮಾಣಪತ್ರದ ಬದಲಿಗೆ ಸಾಮಾನ್ಯ ಮಾರಾಟ ಪತ್ರ, ಜಂಟಿ ಅಭಿವೃದ್ಧಿ ಒಪ್ಪಂದ ಸೇರಿದಂತೆ ಇತರೆ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ದಾಖಲೆಗಳ ಆಧಾರದ ಮೇಲೆ ಅರ್ಹತೆ ಇಲ್ಲದ ನಿವೇಶನಗಳು ಮತ್ತು ಕಟ್ಟಡಗಳಿಗೆ ಇ-ಖಾತಾ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
98 ಆಸ್ತಿಗಳಿಗೆ ನಿಯಮಬಾಹಿರವಾಗಿ ಇ-ಖಾತಾ?
ಈ ಪ್ರಕರಣದಲ್ಲಿ ಕೆ.ಆರ್. ಪುರಂ ವಿಭಾಗದ ಸಹಾಯಕ ಆಯುಕ್ತ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಬಸವರಾಜ್ ಮಾಘಿ ವಿರುದ್ಧ ಪ್ರಮುಖ ಆರೋಪ ಕೇಳಿಬಂದಿದೆ. 2026ರ ಜನವರಿ 29ರಿಂದ ಜೂನ್ 19ರವರೆಗೆ ಅವರ ಲಾಗಿನ್ ಮೂಲಕ ಹೊರಮಾವು ಮತ್ತು ಕೆ.ಆರ್. ಪುರಂ ಪ್ರದೇಶಗಳ 98 ಅನರ್ಹ ಆಸ್ತಿಗಳಿಗೆ ಇ-ಖಾತಾ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕ್ರಿಮಿನಲ್ ಸಂಚು, ವಂಚನೆ ಆರೋಪ!
ಈ ಪ್ರಕರಣದಲ್ಲಿ ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ಅವುಗಳನ್ನು ನೈಜ ದಾಖಲೆಗಳಂತೆ ಬಳಸಿದ ಆರೋಪಗಳಡಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆ ಕೆಂಗೇರಿ ವಿಭಾಗದ ಸಹಾಯಕ ಆಯುಕ್ತೆ ಲೋಕಮಾತಾ ಡಿ.ಎಸ್. ಮತ್ತು ಬಸವರಾಜ್ ಮಾಘಿ ಅವರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಲಾಗಿತ್ತು. ಇದೀಗ 31 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿರುವುದರಿಂದ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ಅಕ್ರಮದಲ್ಲಿ ಇನ್ನೂ ಯಾರ್ಯಾರ ಪಾತ್ರವಿದೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.









