ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ–ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ತಂಡದ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಇಂದು ಮುಂಜಾನೆ ಬೆಂಗಳೂರು ಮತ್ತು ಹಾಸನದಿಂದ ಬಂದಿದ್ದ ನಾಲ್ಕು ಫೋಟೋಗ್ರಫಿ ತಂಡಗಳು ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಸ್ಥಳೀಯ ಕೆಲವರು “ದೇವಸ್ಥಾನದ ಪಾವಿತ್ರತೆಗೆ ಧಕ್ಕೆ ತರುತ್ತಿದ್ದೀರಿ ಎಂದು ಆರೋಪಿಸಿ ಗಲಾಟೆ ಆರಂಭಿಸಿದ್ದಾರೆ.
ಫೋಟೋಗ್ರಾಫರ್ಗಳು ಮನವಿ ಮಾಡಿದರೂ ಕೇಳದ ಹಲ್ಲೆಕೋರರು ಚೇತನ್, ಯಶು ಮತ್ತು ಸೋಮಶೇಖರ್ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾ ಮತ್ತು ಮೊಬೈಲ್ಗಳನ್ನು ಜಖಂಗೊಳಿಸಿರುವುದಾಗಿ ತಿಳಿದುಬಂದಿದೆ. ಮೇಕಪ್ ಆರ್ಟಿಸ್ಟ್ಗಳ ಮೇಲೂ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.
ಈ ಘಟನೆ ಬಳಿಕ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದಾಗ, ಪೊಲೀಸರ ಸಮ್ಮುಖದಲ್ಲೇ ಎರಡೂ ಗುಂಪುಗಳ ನಡುವೆ ಮತ್ತೆ ವಾಗ್ವಾದ ನಡೆದು ಹೊಡೆದಾಟ ಸಂಭವಿಸಿದೆ. ಗಾಯಗೊಂಡ ಫೋಟೋಗ್ರಾಫರ್ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದೆಡೆ, ಸ್ಥಳೀಯರು ಇದು ಪ್ರವಾಸಿ ತಾಣವಲ್ಲ, ಧಾರ್ಮಿಕ ಕೇಂದ್ರವಾಗಿದ್ದು, ಪಾವಿತ್ರತೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ದೇವಸ್ಥಾನದ ಸುತ್ತಲೂ ಬೇಲಿ ಹಾಕಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



