ಬೆಂಗಳೂರು: ಕಡು ಬಡತನದಲ್ಲಿ ಹುಟ್ಟಿ, ಹೋರಾಟದ ಬದುಕಿನ ಮೂಲಕ ಪೊಲೀಸ್ ಇಲಾಖೆಯಲ್ಲಿ ಸಾಧನೆಗೈದು 2025ರ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿರುವ ಷರೀಫ್ ಎಂ ಅವರ ಜೀವನ ಪಥ ಅನೇಕ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಟಂದೇವರ ಕೋಟೆಯಲ್ಲಿ 01-06-1992ರಂದು ಇಮಾಮ್ ಸಾಬ್ ಹಾಗೂ ಇಮಾಂಬಿ ದಂಪತಿಗಳ ಪುತ್ರನಾಗಿ ಜನಿಸಿದ ಷರೀಫ್ ಎಂ ಅವರು, ಬಾಲ್ಯದಲ್ಲೇ ಸಂಕಷ್ಟಗಳನ್ನು ಎದುರಿಸಿದರು. ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಾಸವಿದ್ದು ಶಿಕ್ಷಣ ಪೂರ್ಣಗೊಳಿಸಿದ ಅವರು, ನಂತರ ತಮ್ಮ ಸಹೋದರಿಯ ನೆರವಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು.
ಅವರ ಪರಿಶ್ರಮದ ಫಲವಾಗಿ 10-03-2014ರಂದು ಕೆಎಸ್‌ಐಎಸ್‌ಎಫ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು. ಬುನಾದಿ ತರಬೇತಿ ಬಳಿಕ ಆಂತರಿಕ ಭದ್ರತಾ ವಿಭಾಗದ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದರು.
ನಂತರ 2017ರಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಆಗಿ ಸೇವೆ ಪ್ರಾರಂಭಿಸಿದರು.
ತಾಂತ್ರಿಕವಾಗಿ ನಿಪುಣರಾದ ಷರೀಫ್ ಎಂ ಅವರು ಕಾಲ್ ಡಿಟೇಲ್ ರೆಕಾರ್ಡ್‌ಗಳ (CDR) ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದು, ಅಪರಾಧ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಕೊಲೆ, ದರೋಡೆ, ಮನೆ ಕಳ್ಳತನ, ದ್ವಿಚಕ್ರ ವಾಹನ ಕಳವು ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ಅಲ್ಪ ಸಮಯದಲ್ಲಿ ಭೇದಿಸುವಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ.
ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಮಾಹಿತಿ ಸಂಗ್ರಹಣೆ, ತಾಂತ್ರಿಕ ಸಹಾಯ ಮತ್ತು ವೈಜ್ಞಾನಿಕ ವಿಧಾನಗಳನ್ನು ಪರಿಣಾಮಕಾರಿಯಾಗಿ ಬಳಸಿರುವುದರಿಂದ ಬೆಂಗಳೂರು ಅಪರಾಧ ವಿಭಾಗದಲ್ಲಿ ಅವರು ವಿಶ್ವಾಸಾರ್ಹ ಪೊಲೀಸ್ ಎಂದು ಗುರುತಿಸಿಕೊಂಡಿದ್ದಾರೆ.
ಇವರ ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಹಾಗೂ ಅವಿಶ್ರಾಂತ ಶ್ರಮವನ್ನು ಪರಿಗಣಿಸಿ, 2025ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ.
“ಬಡತನ ನನ್ನನ್ನು ತಡೆಯಲಿಲ್ಲ… ಪರಿಶ್ರಮವೇ ನನ್ನನ್ನು ಈ ಮಟ್ಟಕ್ಕೆ ತಂದಿದೆ. ಸೇವೆಯೇ ನನ್ನ ಧ್ಯೇಯ.” – ಷರೀಫ್ ಎಂ, ಸಿಎಂ ಪದಕಕ್ಕೆ ಭಾಜನರಾದವರು.



